ಮೈಸೂರು,ಏ.17:- ವರುಣಾ ಕ್ಷೇತ್ರವನ್ನು ಕೂಡ ಬೆಂಗಳೂರಿನ ಗೋವಿಂದರಾಜ ನಗರ ರೀತಿ ಅಭಿವೃದ್ಧಿ ಆಗಲು ಸೋಮಣ್ಣನವರನ್ನು ಬೆಂಬಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ಅವರು ಇಂದು ವರುಣಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ನಂಜನಗೂಡು-ಚಾಮರಾಜನಗರ ರಸ್ತೆ ಗೋಳೂರು ಸರ್ಕಲ್ ನಲ್ಲಿ ನಡೆದ ಬಹಿರಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿಂದುಳಿದವರನ್ನು ಹಿಂದೆ ಇಟ್ಟು ತಾವೇ ಮುಂದೇ ಹೋಗಿ ಎಸ್ ಸಿ, ಎಸ್ ಟಿ ಜನಾಂಗಕ್ಕೆ ಅವರು ಎಲ್ಲಿದ್ದಾರೋ ಅಲ್ಲಿಯೇ ಇಟ್ಟು ಅನ್ಯಾಯ ಮಾಡಿದ್ದಾರೆ. ಇದು ಬದಲಾವಣೆಯಾಗಬೇಕು. ಸಾಮಾಜಿಕ ನ್ಯಾಯ ಕೇವಲ ಭಾಷಣ, ಭಾಷಣದಿಂದ ಸಾಮಾಜಿಕ ನ್ಯಾಯ ಸಿಗಲ್ಲ, ಭಾಷಣದಿಂದ ಹಸಿದ ಹೊಟ್ಟೆಗೆ ಅನ್ನ ಸಿಗಲ್ಲ, ತುಳಿತಕ್ಕೊಳಗಾದವರಿಗೆ ನ್ಯಾಯ ಸಿಗಲ್ಲ, ರಾಜಕೀಯ ಇಚ್ಛಾ ಶಕ್ತಿ ಬೇಕು, ಬದಲಾವಣೆ ಮಾಡುವ ನಾಯಕ ಬೇಕು. 60ವರ್ಷ ರಾಜ್ಯ ಆಳಿದ್ದೀರಿ ಅವರಿಗೆ ಏನು ಕೊಟ್ಟಿದ್ದೀರಿ, ಒಂದು ಮುರುಕಲು ಗುಡಿಸಲು ಕೂಡ ಕೊಡಲು ಆಗಿಲ್ಲ, ಮಕ್ಕಳಿಗೆ ಸರಿಯಾದ ವಿದ್ಯೆ ಕೊಡಲು ಆಗಿಲ್ಲ. ನೀವು ಸುಧಾರಣೆ ಮಾಡಿದ್ದರೆ ಸಾಕಷ್ಟು ಅಭಿವೃದ್ಧಿಯಾಗುತ್ತಿತ್ತು. ಬಡವರು ಬಡವರಾಗಿಯೇ ಉಳಿಯುತ್ತಿರಲಿಲ್ಲಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಅನ್ನಭಾಗ್ಯ ೩೦ರೂ.ಕೇಂದ್ರ ಸರ್ಕಾರದ್ದು. ೩ರೂ. ನಿಮ್ಮದು. ಅಕ್ಕಿ ನರೇಂದ್ರ ಮೋದಿಯವರದ್ದು. ಗೋಣಿ ಚೀಲ ಸಿದ್ದರಾಮಯ್ಯನವರದ್ದು. ಹೇಂಗಿದೆ ಸ್ವಾಮಿ ಮಜಾ, ಅನ್ನಭಾಗ್ಯ ಅನ್ನಭಾಗ್ಯ ಅಂತ ಯಾಕೆ ಕೂಗುತ್ತಾರೆ ಇವರು ಬರೋದಕ್ಕೂ ಮುಂಚೆ ರೇಷನ್ ಇರಲಿಲ್ಲವಾ? ಅಕ್ಕಿ ಇರಲಿಲ್ಲವಾ? ಅನ್ನಭಾಗ್ಯದ ಅಕ್ಕಿ ಎಲ್ಲಿ ಹೋಗುತ್ತಿದೆ ಬ್ಲಾಕ್ ಮಾರ್ಕೆಟ್ ಮಾಡುವವರ ಅಂಗಡಿಗೆ ಹೋಗಿ ಪಾಲಿಷ್ ಆಗಿ ಹೋಟೆಲ್ ಗೆ ಹೋಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಎಲ್ಲೆಡೆ ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ಈಗ ನಮ್ಮ ಮೇಲೆ 40% ಆರೋಪ ಮಾಡುತ್ತಿದೆ. ಚುನಾವಣೆಯ ಗಿಮಿಕ್ ಗಾಗಿ 40% ಅಂತಾರೆ. ಹಲವಾರು ಪ್ರಕರಣಗಳಲ್ಲಿ ಕೆಲಸ ಮಾಡದೇ ಬಿಲ್ ತೆಗೆದಿರುವುದು ಲೋಕಾಯುಕ್ತದಲ್ಲಿ ತನಿಖೆಯಾಗುತ್ತಿದೆ. ಇವರದ್ದು 100% ಸರ್ಕಾರ. ಇವರು ಲೋಕಾಯುಕ್ತ ನಿಷ್ಕ್ರೀಯ ಮಾಡಿದ್ದರು. ಈಗ ಲೋಕಾಯುಕ್ತ ಮತ್ತೆ ಕಾರ್ಯಾಚರಿಸುತ್ತಿದೆ. ನಾವು ಮಾತನಾಡಬಾರದು. ನಮ್ಮ ಕೆಲಸಗಳು ಮಾತನಾಡಬೇಕು. ಸೋಮಣ್ಣನವರು ಗೋವಿಂದರಾಜ ನಗರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ವರುಣಾ ಕೂಡ ಬೆಂಗಳೂರಿನ ಗೋವಿಂದರಾಜ ನಗರ ರೀತಿ ಅಭಿವೃದ್ಧಿ ಆಗಲು ಸೋಮಣ್ಣನವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಇಲ್ಲಿ ಸಾಮಾಜಿಕ ಸಾಮರಸ್ಯ ತರಬೇಕಾಗಿದೆ. ಅಭಿವೃದ್ಧಿ ಜಿಡ್ಡುಗಟ್ಟಿದೆ. ಸೋಮಣ್ಣನವರು ವರುಣಾವನ್ನು ನಂಬರ್ ವನ್ ಕ್ಷೇತ್ರ ಮಾಡುವುದಾಗಿ ಪಣ ತೊಟ್ಟಿದ್ದಾರೆ. ಅವರು ಮಾಡೇ ಮಾಡುತ್ತಾರೆ. ಐದು ವರ್ಷ ಸೋಮಣ್ಣವರಿಗೆ ಅವಕಾಶ ಮಾಡಿಕೊಡಿ, ದೇಶದವರು ಬಂದು ತಿರುಗಿ ನೋಡಬೇಕು ಅಂತಹ ಸುಧಾರಣೆ ಮಾಡುತ್ತಾರೆ ಎಂದರು.
ಸೋಮಣ್ಣನವರಿಗೆ ನೀವು ನಂಜನಗೂಡಿಗೆ ಬಂದು ಯಾಕೆ ನಾಮಪತ್ರ ಸಲ್ಲಿಸುತ್ತೀದ್ದೀರಿ ಎಂದು ಕೇಳಿದೆ. ವರುಣಾದಲ್ಲಿ ತಾಲೂಕು ಕೇಂದ್ರ ಇಲ್ಲ ಎಂದರು. ಮೊದಲೇ ಹೇಳಿದ್ದರೆ ವರುಣಾದಲ್ಲಿ ತಾಲೂಕು ಕೇಂದ್ರ ಮಾಡೇ ಬರುತ್ತಿದ್ದೆ. ಬಿಜೆಪಿಗೆ ಅಧಿಕಾರ ನೀಡಿದರೆ ಇಲ್ಲಿ ತಾಲೂಕು ಕಛೇರಿಗೆ ಮಂಜೂರಾತಿ ಮಾಡುತ್ತೇವೆ. 2008ರಿಂದ ವರುಣಾ ಕ್ಷೇತ್ರವಾಗಿದೆ. ತಾಲೂಕಾ ಶಕ್ತಿ ಕೇಂದ್ರವಿಲ್ಲದಿದ್ದರೆ ಆಡಳಿತ ಹೇಗೆ? ಇದೆಂತಹ ವ್ಯವಸ್ಥೆರಿ. ಇದು ಬದಲಾವಣೆಯಾಗಬೇಕು. ನಮ್ಮದೇ ಆದ ಸುಧಾರಣೆಯಾಗಬೇಕು, ನಮ್ಮದೇ ಆದ ವ್ಯವಸ್ಥೆಯಾಗಬೇಕು ಎಂದರು.