ಮಡಿಕೇರಿ : ಖಾಸಗಿ ಜೀಪ್ಗಳನ್ನು ಬಾಡಿಗೆಗೆ ಓಡಿಸಲು ಅವಕಾಶವಿಲ್ಲದೇ ಇರುವುದರಿಂದ, ಖಾಸಗಿ ಜೀಪ್ಗಳನ್ನು ಸಾರಿಗೆ ವಾಹನಗಳನ್ನಾಗಿ ಪರಿವರ್ತಿಸಿಕೊಂಡು ನಿಯಮಾನುಸಾರ ಉಪಯೋಗಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಧುರ ಎಸ್.ಎನ್ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಅಬ್ಬಿಫಾಲ್ಸ್ ಪ್ರವಾಸಿ ತಾಣದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರಿಗೆ ನೀಡಲಾಗಿರುವ ದೂರು ಮತ್ತು ಈ ಪ್ರಾಧಿಕಾರಕ್ಕೆ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಸಾರಿಗೆ ಕಛೇರಿಯಲ್ಲಿ ಕೆ.ನಿಡುಗಣೆ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಖಾಸಗಿ ಜೀಪ್ ಮಾಲೀಕರುಗಳ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಜೀಪ್ ಮಾಲೀಕರುಗಳಿಗೆ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಖಾಸಗಿ ಜೀಪ್ಗಳನ್ನು ಬಾಡಿಗೆಗೆ ಓಡಿಸಲು ಅವಕಾಶವಿಲ್ಲದೇ ಇರುವುದರಿಂದ, ಅವಕಾಶ ಇಲ್ಲದಿರುವುದನ್ನು ಮನದಟ್ಟು ಮಾಡಿ ಖಾಸಗಿ ಜೀಪ್ಗಳನ್ನು ಸಾರಿಗೆ ವಾಹನಗಳನ್ನಾಗಿ ಪರಿವರ್ತಿಸಿಕೊಂಡು ನಿಯಮಾನುಸಾರ ಉಪಯೋಗಿಸಲು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ.
ತಪ್ಪಿದಲ್ಲಿ ಕಾನೂನಿನಡಿಯಲ್ಲಿ ಸೂಕ್ತ ಕ್ರಮ ಕೈಗೊಂಡು ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದೆಂದು ತಿಳುವಳಿಕೆ ನೀಡಲಾಗಿದೆ. ಪರಿವರ್ತನೆಗೆ ಅನುಸರಿಸಬೇಕಾದ ವಿಧಾನದ ಬಗ್ಗೆ ಮತ್ತು ಪಾವತಿಸಬೇಕಾಗುವ ಶುಲ್ಕ ಮತ್ತು ತೆರಿಗೆಯ ಬಗ್ಗೆಯೂ ಚಾಲಕರಿಗೆ ಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಇಲಾಖಾ ವತಿಯಿಂದ ಖಾಸಗಿ ವಾಹನಗಳು ಸಾರಿಗೆ ವಾಹನಗಳಾಗಿ ಪರಿವರ್ತಿಸಲು, ಸುಗಮವಾಗಿ, ಶೀಘ್ರವಾಗಿ, ನಿಯಮಾನುಸಾರ ಈ ಕಛೇರಿಯಿಂದ ಎಲ್ಲಾ ರೀತಿಯಲ್ಲಿ ಸಹಕರಿಸುವುದಾಗಿಯೂ ಮತ್ತು ಪ್ರಥಮ ಆಧ್ಯತೆಯ ಮೇರೆಗೆ ಪರಿವರ್ತನೆಗೆ ಆಸಕ್ತರು ಸಲ್ಲಿಸುವ ಅರ್ಜಿಗಳನ್ನು ಮಾಡಿಕೊಡಲಾಗುವುದೆಂದು, ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ ಕಟ್ಟುನಿಟ್ಟಾಗಿ ಕಾನೂನಿನಡಿಯಲ್ಲಿ ಕ್ರಮ ಜರುಗಿಸಲಾಗುವುದೆಂದು ಎಂದು ಸಾರಿಗೆ ಅಧಿಕಾರಿ ಮಧುರ ಎಸ್.ಎನ್ ಸ್ಪಷ್ಟಪಡಿಸಿದ್ದಾರೆ.