ಮಂಡ್ಯ:ಕೆ.ಆರ್ ಪೇಟೆ ತಾಲ್ಲೂಕಿನ ತ್ರಿವೇಣಿ ಸಂಗಮದ ಕುಂಭಮೇಳ ಸಂಬಂಧ ಹಾಗೂ ಕಿಕ್ಕೇರಿ ಹೋಬಳಿ ಸೊಳ್ಳೇಪುರದಿಂದ ಶಂಕರಪುರ
ದವರೆಗೆ ನಡೆಸಿದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಾಕಿ ಹಣ ಕೊಡಿಸಿಕೊಡಬೇಕೆಂದು ಬಂಡೀಹೊಳೆ ಗುತ್ತಿಗೆದಾರ ಬಿ.ಆರ್.ಸುರೇಶ್ ತಮ್ಮ ಅಳಲು ತೋಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುರ, ಅಂಬಿಗರಹಳ್ಳಿ ಮತ್ತು ಸಂಗಾಪುರ ಗ್ರಾಮಗಳ ಹತ್ತಿರ ಬರುವ ತ್ರಿವೇಣಿ ಸಂಗಮದಲ್ಲಿ ನಡೆದ ಶ್ರೀ ಮಲೈಮಹದೇಶ್ವರಸ್ವಾಮಿ ಜಯಂತಿ ಹಾಗೂ ಕುಂಭಮೇಳ ಕಾರ್ಯಕ್ರಮದ ಅಂಗವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೆ.ಆರ್.ಪೇಟೆ ಶಾಸಕರಾದ ನಾರಾಯಣಗೌಡ ಅವರ ಆದೇಶದ ಮೇರೆಗೆ ಅಂದಾಜು ೩೦ ಲಕ್ಷ ರೂ.ವೆಚ್ಚದ ಕಾಮಗಾರಿಗಳನ್ನು ನೆರವೇರಿಸಿರುತ್ತೇನೆ. ಕಾಮಗಾರಿಗಳ ಬಾಬ್ತು ಸುಮಾರು ೧೨ ಲಕ್ಷಗಳ ಹಣ ತೆಗೆದುಕೊಂಡಿರುತ್ತೇನೆ. ೧೮ ಲಕ್ಷದ ಉಳಿಕೆ ಹಣವನ್ನು ಇಲ್ಲಿಯವರೆಗೂ ಕೊಟ್ಟಿರುವುದಿಲ್ಲ ಎಂದು ಆಪಾದಿಸಿದರು.ಅದೇ ರೀತಿ ಕಿಕ್ಕೇರಿ ಹೋಬಳಿ ಸೊಳ್ಳೇಪುರದಿಂದ ಶಂಕರಪುರದವರೆಗೆ ನಿರ್ಮಿಸಿರುವ ಡಾಂಬರ್ ರಸ್ತೆ ಕಾಮಗಾರಿಯನ್ನು ಅರೆಕಲ್ಲಮ್ಮ ದೇವಸ್ಥಾನದ ಹಬ್ಬದ ಸಂದರ್ಭದಲ್ಲಿ ೩೨ ಲಕ್ಷ ರೂ ವೆಚ್ಚದಲ್ಲಿ ನಿರ್ವಹಿಸಿದ್ದು ಈ ಪೈಕಿ ೧೫ ಲಕ್ಷ ರೂ. ಸಂದಾಯವಾಗಿದ್ದು ೧೭ ಲಕ್ಷ ರೂ. ಬರಬೇಕಾಗಿದೆ ಎಂದರು.
ನಾನು ಈಗ ಸಾಲ ಮಾಡಿಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದು ಸಾಲಗಾರರ ಕಾಟ ಹೆಚ್ಚಾಗಿ, ಆರ್ಥಿಕ ಪರಿಸ್ಥಿತಿ ಹೆಚ್ಚಾಗಿ ಕುಟುಂಬವನ್ನು ನಿರ್ವಹಿಸಲು ಬಹಳ ತೊಂದರೆ ಉಂಟಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದರು.
ಈ ಸಂಬಂಧ ಮುಖ್ಯಮಂತ್ರಿ,ಮುಖ್ಯ ಕಾರ್ಯದರ್ಶಿ,ಲೋಕೋಪಯೋಗಿ ಪ್ರಧಾನ ಕಾರ್ಯದರ್ಶಿ,ಮಾನವ ಹಕ್ಕುಗಳ ಆಯೋಗದ ವಿಲೇಖನಾಧಿಕಾರಿಗಳು ಹಾಗೂ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರಿನ ಪ್ರತಿಗಳನ್ನು ಕಳಿಸಿರುವುದಾಗಿ ನೊಂದ ಗುತ್ತಿಗೆದಾರ ಸುರೇಶ್ ಲಿಖಿತ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಂಡಿಹೊಳೆ ನಾಗರಾಜು, ಕೆಆರ್ಪೇಟೆಯ ಶಿವಣ್ಣ,ಚಂದ್ರು ಹಾಜರಿದ್ದರು.
ಅಭಿವೃದ್ಧಿ ಕಾಮಗಾರಿಗಳ ಉಳಿಕೆ ಹಣಕ್ಕಾಗಿ ಗುತ್ತಿಗೆದಾರ ಮೊರೆ
