ಮೈಸೂರು: ಆಷಾಢ ಮಾಸ ಹಿನ್ನೆಲೆಯಲ್ಲಿ ಮೈಸೂರಿನ ಅದಿದೇವತೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕಾಗಿ ನಾಡಿನಾದ್ಯಂತ ಲಕ್ಷಾಂತರ ಭಕ್ತರು ಆಗಮಿಸಲಿರುವ ಹಿನ್ನೆಲೆಯಲ್ಲಿ ಅವರ ಅನುಕೂಲಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.ಆಷಾಢ ಮಾಸದ ಶುಕ್ರವಾರಗಳು ಮತ್ತು ವರ್ದಂತಿ ಜುಲೈ 12, 19, 26, 27 ಹಾಗೂ ಆಗಸ್ಟ್ 02 ರಂದು ಕಡೆಯ ಆಷಾಢ ಶುಕ್ರವಾರ ಈ ಐದು ದಿನಗಳು ಮಾತ್ರ ದೇವಾಲಯದ ವತಿಯಿಂದ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಚಾಮುಂಡಿಬೆಟ್ಟಕ್ಕೆ ಪ್ರಯಾಣಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಆಷಾಢ ಮಾಸದ ಶನಿವಾರ ಹಾಗೂ ಭಾನುವಾರಗಳಂದು ಸಾರ್ವಜನಿಕ ವಾಹನಗಳನ್ನು ಚಾಮುಂಡಿಬೆಟ್ಟದ ಪ್ರವೇಶಕ್ಕೆ ನಿಷೇಧವಿಧಿಸಿದ್ದು, ಲಲಿತ ಮಹಲ್ ಪಾರ್ಕಿಂಗ್ನಲ್ಲಿಯೇ ಸಾರ್ವಜನಿಕರು ತಮ್ಮ ವಾಹನ ನಿಲ್ಲಿಸಿ, ಕೆಎಸ್ಆರ್ಟಿಸಿ ವಾಹನಗಳ ಮೂಲಕ ಹಣ ಪಾವತಿ ಮಾಡಿ ಟಿಕೆಟ್ ಪಡೆದು ಚಾಮುಂಡಿಬೆಟ್ಟಕ್ಕೆ ಹೋಗಬಹುದು. ಚಾಮುಂಡಿಬೆಟ್ಟದ ಗ್ರಾಮಸ್ಥರು ಈ ಸಮಯದಲ್ಲಿ ಚಾಮುಂಡಿಬೆಟ್ಟ ಗ್ರಾಮದಲ್ಲಿ ವಿಳಾಸವಿರುವ ಆಧಾರ್ ಕಾರ್ಡ್ ಅನ್ನು ಹಾಜರುಪಡಿಸಿ ಪ್ರವೇಶ ಪಡೆಯಬಹುದು.ಚಾಮುಂಡೇಶ್ವರಿ ಅಮ್ಮನವರ ದೇವಾಲಯದ ಪ್ರವೇಶಕ್ಕೆ ಯಾವುದೇ ಪಾಸ್ ವ್ಯವಸ್ಥೆ ಇಲ್ಲವಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿರುವ 300 ರೂಗಳ ಪ್ರವೇಶ, 50 ರೂಗಳ ಪ್ರವೇಶ ಮತ್ತು ಸರ್ವದರ್ಶನದ ಮೂಲಕ ದೇವಾಲಯಕ್ಕೆ ಪ್ರವೇಶ ಪಡೆಯಬಹುದು.ಭಕ್ತಾದಿಗಳಿಗೆ ಅನುಕೂಲಕ್ಕಾಗಿ ಲಲಿತಮಹಲ್ ಪಾರ್ಕಿಂಗ್ ಮತ್ತು ಮಹಿಷಾಸುರ ವೃತ್ತದ ಬಳಿ ಹಾಗೂ ವಿಶೇಷ ಪ್ರವೇಶದ ಬಳಿಯಲ್ಲಿಯೇ ಪ್ರವೇಶದ ಟಿಕೆಟ್, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ತುರ್ತು ಚಿಕಿತ್ಸೆ ವ್ಯವಸ್ಥೆ ಹಾಗೂ ತುರ್ತು ವಾಹನದ ವ್ಯವಸ್ಥೆ ಮಾಡಲಾಗಿದೆ.ಪ್ರಸಾದ ವ್ಯವಸ್ಥೆ: ಭಕ್ತಾಧಿಗಳಿಗೆ ಪ್ರಸಾದ ವಿತರಿಸುವ ಸಾರ್ವಜನಿಕರು, ಕಡ್ಡಾಯವಾಗಿ ಪ್ರಸಾದ ವಿತರಿಸುವ ಮೊದಲು ಆಹಾರ ನಿಯಂತ್ರಣ ಇಲಾಖೆಯ ಅಂಕಿತಾಧಿಕಾರಿಗಳಿಂದ ದೃಢೀಕರಣ ಪಡೆದು, ಜಿಲ್ಲಾಧಿಕಾರಿಗಳ ಕಚೇರಿಯ ಧಾರ್ಮಿಕ ದತ್ತಿ ಶಾಖೆಯಲ್ಲಿ ಅನುಮತಿ ಪತ್ರ ಪಡೆದು ತಮಗೆ ನಿಗದಿಪಡಿಸಿರುವ ಸಮಯದಲ್ಲಿ ಬಂದು ನಿಗದಿತ ಸ್ಥಳಗಳಲ್ಲಿ ಪ್ರಸಾದವನ್ನು ವಿತರಿಸಬೇಕು ಹಾಗೂ ಆ ಸ್ಥಳವನ್ನು ತಾವೇ ಸ್ವಚ್ಚಗೊಳಿಸಬೇಕಿದೆ.