ತೀರ್ಥಹಳ್ಳಿ: ಪಟ್ಟಣ ಸಮೀಪದ ನಿರ್ಮಾಣ ಹಂತದಲ್ಲಿದ್ದ ಕುರುವಳ್ಳಿ ವಿಶ್ವಕರ್ಮ ಸಮುದಾಯ ಭವನದಲ್ಲಿ ಗುರುವಾರ ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಕೂಲಿ ಕಾರ್ಮಿಕರ ಕೊಲೆಯಾಗಿದೆ. ದಾವಣಗೆರೆ ನಗರದ ಬೀರೇಶ್ (35) ಮತ್ತು ಮಂಜುನಾಥ್ (46) ಕೊಲೆಯಾದವರು. ಕೊಲೆ ಆರೋಪಿ ರಾಜಣ್ಣನನ್ನು (58) ಬಂಧಿಸಲಾಗಿದೆ.
ಸಮುದಾಯ ಭವನದ ಟೈಲ್ಸ್ ಜೋಡಣೆ ಕೆಲಸಕ್ಕಾಗಿ ದಾವಣಗೆರೆಯಿಂದ 12 ದಿನಗಳ ಹಿಂದೆ 5 ಜನರು ಬಂದಿದ್ದರು. ರಾಜಣ್ಣ ಎಲ್ಲ ಕೂಲಿ ಕೆಲಸಗಾರರಿಗೆ ಅಡುಗೆ ಮಾಡಿಕೊಂಡಿದ್ದರು. ಗುರುವಾರ ಬೆಳಿಗ್ಗೆ ಕಾರ್ಮಿಕರಿಗೆ ಇಡ್ಲಿ ಕೊಟ್ಟಿದ್ದರು. ರಾತ್ರಿಯೂ ಅದನ್ನೇ ತಿನ್ನಲು ರಾಜಣ್ಣ ಹೇಳಿದ್ದಾರೆ. ಇದೇ ವಿಚಾರಕ್ಕೆ ಇವರ ಮಧ್ಯೆ ಗಲಾಟೆಯಾಗಿದ್ದು ರಾಜಣ್ಣನನ್ನು ಮಂಜುನಾಥ್ ಮತ್ತು ಬೀರೇಶ್ ಎಳೆದಾಡಿ ಹೊಡೆದಿದ್ದಾರೆ.
ಇದರಿಂದ ಕೋಪಗೊಂಡ ರಾಜಣ್ಣ ರಾತ್ರಿ ಊಟ ಮುಗಿಸಿ ಟೆರೆಸ್ ಮೇಲೆ ಮಲಗಿದ್ದ ಮಂಜುನಾಥ್, ಕಟ್ಟಡದ ಒಳಗೆ ಮಲಗಿದ್ದ ಬೀರೇಶ್ ಮೇಲೆ ಪಿಕಾಸಿಯಿಂದ ತಲೆಗೆ ಹೊಡೆದಿದ್ದಾರೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಕೊಲೆಯಾಗಿರುವ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.