ಛೇ.. ಎಲ್ಲವೂ ಸರಿಯಿದ್ದಿದ್ದರೆ.. ಕ್ರೂರ ವಿಧಿ ತನ್ನ ಅಟ್ಟಹಾಸ ಮೆರೆಯದೇ ಇದ್ದಿದ್ದರೆ.. ಥೈಲ್ಯಾಂಡ್ನಿಂದ ಸುರಕ್ಷಿತವಾಗಿ ವಾಪಸ್ ಆಗಿದ್ದರೆ, ಇಂದು ತಮ್ಮ 16ನೇ ವಿವಾಹ ವಾರ್ಷಿಕೋತ್ಸವವನ್ನ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಖುಷಿ ಖುಷಿಯಾಗಿ ಆಚರಿಸುತ್ತಿದ್ದರು. ಪತಿ ವಿಜಯ್ ರಾಘವೇಂದ್ರಗಾಗಿ ಸ್ಪಂದನಾ ಇಂದು ವಿಶೇಷ ಸರ್ಪ್ರೈಸ್ ಪ್ಲಾನ್ ಮಾಡಿಕೊಂಡಿರುತ್ತಿದ್ದರು. ಆದರೆ, ದುರಾದೃಷ್ಟವಶಾತ್ ಇದ್ಯಾವುದೂ ಆಗಲಿಲ್ಲ. ಫ್ಯಾಮಿಲಿ ಜೊತೆ ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದ ಸ್ಪಂದನಾ ಜೀವಂತವಾಗಿ ವಾಪಸ್ ಬರಲೇ ಇಲ್ಲ. ಪತ್ನಿ ಇಲ್ಲದೆ, ಸ್ಪಂದನಾ ನೆನಪಿನಲ್ಲಿ ವಿವಾಹ ವಾರ್ಷಿಕೋತ್ಸವದಂದು ನಟ ವಿಜಯ್ ರಾಘವೇಂದ್ರ ಭಾವುಕ ವಿಡಿಯೋ ಹಂಚಿಕೊಂಡಿದ್ದಾರೆ.
‘’ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ..’’ ಎಂದು ಪತ್ನಿ ಸ್ಪಂದನಾ ಬಗ್ಗೆ ವಿಜಯ್ ರಾಘವೇಂದ್ರ ಭಾವುಕ ಸಾಲುಗಳನ್ನ ಬರೆದಿದ್ದಾರೆ.
‘’16ನೇ ವಿವಾಹ ವಾರ್ಷಿಕೋತ್ಸವ. ಐ ಲವ್ ಯೂ ಚಿನ್ನ!’’ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡು, ವಿಡಿಯೋವೊಂದನ್ನ ವಿಜಯ್ ರಾಘವೇಂದ್ರ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ
‘’ಚಿನ್ನ..
ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ..
ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ..
ಬದುಕನ್ನು ಕಟ್ಟಿ ಸರ್ವಸ್ವವಾದೆ..
ಉಸಿರಲ್ಲಿ ಬೆರೆತು ಜೀವಂತವಾದೆ..
ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು..
ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ..
ಶೌರ್ಯನಲ್ಲಿ ನಾ ನಿನ್ನ ಬಿಗಿದಪ್ಪುವಷ್ಟು..’’ ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ.
ಹಠಾತ್ ಸಾವನ್ನಪ್ಪಿದ ಸ್ಪಂದನಾ
ಕುಟುಂಬಸ್ಥರೊಂದಿಗೆ ಸ್ಪಂದನಾ ಬ್ಯಾಂಕಾಕ್ ಪ್ರವಾಸದಲ್ಲಿದ್ದರು. ಹೃದಯಾಘಾತದಿಂದ ಸ್ಪಂದನಾ ಸಾವನ್ನಪ್ಪಿದರು. ಆಗಸ್ಟ್ 9 ರಂದು ಸ್ಪಂದನಾ ಅಂತ್ಯಸಂಸ್ಕಾರವನ್ನ ವಿಜಯ್ ರಾಘವೇಂದ್ರ, ಪುತ್ರ ಶೌರ್ಯ ನೆರವೇರಿಸಿದರು.
2007ರಲ್ಲಿ ಮದುವೆ
ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. 2007ರ ಆಗಸ್ಟ್ 26 ರಂದು ಸ್ಪಂದನಾ – ವಿಜಯ್ ರಾಘವೇಂದ್ರ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸ್ಪಂದನಾ – ವಿಜಯ್ ರಾಘವೇಂದ್ರ ದಂಪತಿಗೆ ಶೌರ್ಯ ಎಂಬ ಪುತ್ರನಿದ್ದಾನೆ. ಅನ್ಯೋನ್ಯವಾಗಿ ಸಂಸಾರ ಸಾಗಿಸುತ್ತಿದ್ದ ದಂಪತಿಯ ಜೀವನದಲ್ಲಿ ಈಗ ದುರಂತ ಸಂಭವಿಸಿದೆ.