ಮಂಡ್ಯ : ರಾಜಕೀಯವಾಗಿ ಮಂಡ್ಯ ಶ್ರೀಮಂತ ಜಿಲ್ಲೆ. ಆದರೆ ಇಲ್ಲಿ ನಾಯಕತ್ವದ ಕೊರತೆಯಿಂದ ಪ್ರಗತಿ ಕುಂಠಿತಗೊಂಡಿದೆ. ಎರಡೂ ರಾಜಕೀಯ ಪಕ್ಷಗಳು ಅಭಿವೃದ್ಧಿ ಮಾಡಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರ ನಗರದ ಅಂಬೇಡ್ಕರ್ ವೃತ್ತದಿಂದ ನೂರಡಿ ರಸ್ತೆ, ಹೊಸಹಳ್ಳಿ ವೃತ್ತ, ವಿ.ವಿ. ರಸ್ತೆ ಮಾರ್ಗವಾಗಿ ಮಹಾವೀರ ವೃತ್ತದವರೆಗೆ ರೋಡ್ಶೋ ನಡೆಸಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಮಂಡ್ಯ ನಗರವನ್ನು ಆಧುನಿಕ ನಗರವನ್ನಾಗಿ ಅಭಿವೃದ್ಧಿಪಡಿಸಲು ಬಿಜೆಪಿ ಸಂಕಲ್ಪ ಮಾಡಿದೆ. ಬೆಂಗಳೂರಿನಲ್ಲಿರುವ ಎಲ್ಲಾ ಸೌಲಭ್ಯಗಳು ಮಂಡ್ಯದಲ್ಲೂ ಸಿಗುವಂತಾಗಬೇಕು. ಇಲ್ಲಿ ಕೈಗಾರಿಕೆಗಳು ಬೆಳವಣಿಗೆ ಕಾಣಬೇಕು. ಮಂಡ್ಯ ಎಂದರೆ ಇಂಡಿಯಾ ಎನ್ನುವ ಮಾದರಿಯಲ್ಲಿ ರಾಷ್ಟ್ರದ ಗಮನ ಸೆಳೆಯುವ ರೀತಿ ಅಭಿವೃದ್ಧಿಪಡಿಸುವ ಗುರಿಯನ್ನು ಬಿಜೆಪಿ ಹೊಂದಿರುವುದಾಗಿ ಹೇಳಿದರು.
ಜಯರಾಂ ಕೊಡುಗೆ ಅಪಾರ :
ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ದಿವಂಗತ ಎಸ್.ಡಿ.ಜಯರಾಂ ಅವರ ಕೊಡುಗೆ ಅಪಾರ. ಎಸ್.ಡಿ.ಜಯರಾಮ್ ಅವರು ಒಬ್ಬ ಹೃದಯವಂತ ರಾಜಕಾರಣಿಯಾಗಿದ್ದರು. ಅವರ ಮಗ ಅಶೋಕ್ ಕೂಡ ಹೃದಯವಂತ. ಎಸ್.ಡಿ.ಜಯರಾಮ್ ಅಭಿಮಾನಿಗಳು, ಬೆಂಬಲಿಗರು ಯಾವ ಪಕ್ಷದಲ್ಲೇ ಇದ್ದರೂ ಅಶೋಕ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಕೆ.ವಿ. ಶಂಕರಗೌಡರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದರು. ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ವಿದ್ಯಾದಾನ ಮಾಡಿದ್ದರು. ಜೊತೆಗೆ ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರೂ ಸಹ ನನ್ನ ತಂದೆಯ ಸ್ನೇಹಿತರಾಗಿದ್ದರು. ಇಲ್ಲಿನ ಜನತೆ ಹೃದಯವಂತರು, ಚಿನ್ನ ಬೆಳೆಯುವ ಮಣ್ಣಿನಲ್ಲಿ ಅಭಿವೃದ್ಧಿ ಕಾಣಬೇಕಿದೆ. ಅದಕ್ಕಾಗಿ ಅಶೋಕ್ ಸೇರಿದಂತೆ ಜಿಲ್ಲೆಯ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕೋರಿದರು.
ಸವಾಲು ಸ್ವೀಕರಿಸಿ ಮೈಷುಗರ್ ಅಭಿವೃದ್ಧಿ :
ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳಿಂದ ಮೈ ಶುಗರ್ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿರಲಿಲ್ಲ. ನಾವು ಅಧಿಕಾರಕ್ಕೆ ಬಂದ ನಂತರ ಸವಾಲಾಗಿ ಸ್ವೀಕರಿಸಿ ಕಾರ್ಖಾನೆ ಆರಂಭಕ್ಕೆ ಒತ್ತು ನೀಡಿ ಹಣ ಬಿಡುಗಡೆ ಮಾಡಿದವು. ಮುಂದಿನ ಸಾಲಿನಲ್ಲಿ ಕಾರ್ಖಾನೆಗಳಿಗೆ ಸಹ ವಿದ್ಯುತ್ ಘಟಕ ಮತ್ತು ಯಥನಾಲ್ ಪ್ಲಾಂಟ್ ಸ್ಥಾಪಿಸಿ ಮೈಸೂರ ಕಾರ್ಖಾನೆಯ ಒಂದು ಟನ್ ಕಬ್ಬು ಕೂಡ ಹೊರಗಿನ ಕಾರ್ಖಾನೆ ಗಳಿಗೆ ಸಾಧನೆಯಾಗದಂತೆ ತಡೆದು ಕಾರ್ಖಾನೆಯ ಪುನಶ್ಚೇತನಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು.
ಕೆ.ಆರ್.ಎಸ್. ಆಧುನೀಕರಣ :
ಕೃಷ್ಣರಾಜಸಾಗರ ಅಚ್ಚುಕಟ್ಟು ನಾಲೆಗಳ ಆಧುನಿಕರಣ ಮಾಡಿರುವುದಲ್ಲದೆ ಅಣೆಕಟ್ಟೆಯ ಗೇಟುಗಳನ್ನು ಬದಲಾವಣೆ ಮಾಡಿ ನೀರು ಸೋರಿಕೆಯಾಗದಂತೆ ತಡೆದಿದ್ದೇವೆ. ಅಣೆಕಟ್ಟೆಯ ಸುರಕ್ಷತೆ ಮತ್ತು ಭದ್ರತೆಗೆ ಸರ್ವ ರೀತಿಯ ಕ್ರಮಗಳನ್ನು ಕೈಗೊಂಡು ರೈತರ ಬೆಳೆಗಳಿಗೆ ಸಕಾಲದಲ್ಲಿ ನೀರು ಹರಿಯುವಂತೆ ನಾಲಾ ಜಾಲವನ್ನು ಆಧುನೀಕರಣ ಮಾಡಲು ಕ್ರಮವಹಿಸಲಾಗಿದೆ. ಮಂಡ್ಯದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದರು.
ಚಿತ್ರನಟಿ ತಾರಾ ಮಾತನಾಡಿ, ಮಂಡ್ಯ ಜನರು ಸುಮ್ಮನೆ ಯಾವುದನ್ನು ಒಪ್ಪಿಕೊಳ್ಳುವುದಿಲ್ಲ. ಅದು ಸಿನಿಮಾ ಆದರೂ ಸರಿ, ಸರ್ಕಾರವಾದರೂ ಸರಿ, ನಾಯಕನಾದರೂ ಸರಿ. ಅಂಬರೀಶ್ ಹುಟ್ಟಿ ಬೆಳೆದ ನಾಡಿನಲ್ಲಿ ಇಂದು ಬಿಜೆಪಿ ಅಲೆ ಎದ್ದಿದೆ. ಅಶೋಕ್ ಜಯರಾಮ್ ಪರ ವಾತಾವರಣ ಸೃಷ್ಟಿಯಾಗಿದೆ. ಹಾಗಾಗಿ ಮಂಡ್ಯದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಸಿದ್ದರಾಮಯ್ಯ, ಮಾಜಿ ಶಾಸಕರಾದ ನೆ.ಲ. ನರೇಂದ್ರಬಾಬು, ಡಿ.ಎಸ್. ವೀರಯ್ಯ, ಮುಖಂಡರಾದ ಎಚ್.ಆರ್. ಅರವಿಂದ್, ಸಿ.ಟಿ. ಮಂಜುನಾಥ್, ವಸಂತ್, ಶಶಿಕುಮಾರ್, ಬೇಲೂರು ಸೋಮಶೇಖರ್ ಇತರರಿದ್ದರು.