ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆಗಳು ನಡೆದಿದ್ದು, ನಾಳೆ, ನಾಡಿದ್ದು ರಾಜ್ಯ ಮಟ್ಟದ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಅನುಮೋದನೆಗೆ ಕಳುಹಿಸಲಾಗುವುದು. ಹೈಕಮಾಂಡ್ ಏ.8 ರಂದು ಪಟ್ಟಿಗೆ ಒಪ್ಪಿಗೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಈ ತಿಂಗಳ 8 ರಂದು ಸಂಸದೀಯ ಮಂಡಳಿ ಸಭೆ ಇದೆ. ಆ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಲಿದೆ ಎಂದರು.
ಕಳೆದ 2 ದಿನಗಳಿಂದ ಪ್ರತೀ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಜಿಲ್ಲಾವಾರು ಕೋರ್ಕಮಿಟಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಈ ಅಭಿಪ್ರಾಯಗಳನ್ನೆಲ್ಲ ಕ್ರೂಢೀಕರಿಸಿ ನಾಳೆ ನಾಡಿದ್ದು ರಾಜ್ಯಮಟ್ಟದ ಸಭೆಯಲ್ಲಿ ಒಟ್ಟಿಗೆ ಪಟ್ಟಿಯನ್ನು ಸಿದ್ಧಗೊಳಿಸಿ ಹೈಕಮಾಂಡ್ನ ಒಪ್ಪಿಗೆಗೆ ಕಳುಹಿಸುತ್ತೇವೆ ಎಂದರು.
ಈ ತಿಂಗಳ 8ರ ಹೊತ್ತಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಪ್ರಕಟಿಸಲಿದೆ ಎಂದು ಅವರು ಹೇಳಿದರು. ಹಾಲಿ ಶಾಸಕರ ಬಗ್ಗೆಯಾಗಲಿ ಸಂಭವನೀಯ ಅಭ್ಯರ್ಥಿಗಳ ಬಗ್ಗೆಯಾಗಲಿ ಯಾವ ಅಸಮಾಧಾನ ಇಲ್ಲ, ಪೈಪೋಟಿ ಇದೆ ನಿಜ, ಒಂದೊಂದು ಕ್ಷೇತ್ರಕ್ಕೆ ನಾಲ್ಕೈದು ಅಲ್ಲ, 10-15 ಅಭ್ಯರ್ಥಿಗಳು ಪೈಪೋಟಿ ನಡೆಸಿದ್ದಾರೆ. ಇದೆಲ್ಲ ಬಿಜೆಪಿ ಗೆಲುವನ್ನು ಸೂಚಿಸುತ್ತದೆ. ನಾವು ಸರ್ವೆ ನಡೆಸಿದ್ದೇವೆ. ಬಿಜೆಪಿ ಚುನಾವಣೆಯಲ್ಲಿ ಗೆಲ್ಲಲಿದೆ ಎಂದರು.