ಚೆನ್ನೈ: ತಮಿಳುನಾಡು ವಿದ್ಯುತ್ ಸಚಿವ ವಿ ಸೆಂಥಿಲ್ ಬಾಲಾಜಿ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ, ಪರಿಶೀಲನೆ ಮಾಡಿದ್ದಾರೆ.
ಸಚಿವ ಸೆಂಥಿಲ್ ಅವರ ಜತೆ ನಂಟು ಹೊಂದಿರುವ ಕೆಲವು ವ್ಯಕ್ತಿಗಳಿಗೆ ಸೇರಿದ ಕರೂರು ಮತ್ತು ಕೊಯಮತ್ತೂರು ಸೇರಿದಂತೆ ವಿವಿಧ ನಗರಗಳ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಸಚಿವರ ಹತ್ತಿರದ ಸಂಬಂಧಿಕರು ಮತ್ತು ಕೆಲವು ಗುತ್ತಿಗೆದಾರರಿಗೆ ಸೇರಿದ ಸುಮಾರು 50 ಜಾಗಗಳಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳ ತಂಡಗಳು ಪರಿಶೀಲನೆ ನಡೆಸಿದೆ.
ಕರೂರ್ನ ಹಿರಿಯ ಡಿಎಂಕೆ ನಾಯಕರಾದ ಸೆಂಥಿಲ್ ಬಾಲಾಜಿ ಅವರು ಅಬಕಾರಿ ಇಲಾಖೆಯನ್ನೂ ನಿರ್ವಹಿಸುತ್ತಿದ್ದಾರೆ. ತಪಾಸಣೆಗೆ ತೆರಳಿದ ಐಟಿ ಅಧಿಕಾರಿಗಳಿಗೆ ಕೆಲ ಸಮಯ ಆತಂಕದ ಸನ್ನಿವೇಶ ಎದುರಾಗಿತ್ತು. ಆದಾಯ ತೆರಿಗೆ ಅಧಿಕಾರಿಗಳು ಬಳಸಿದ್ದ ಕಾರಿನ ಮೇಲೆ ಕರೂರ್ನಲ್ಲಿ ಕೆಲವು ದುಷ್ಕರ್ಮಿಗಳು ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಒಂದು ಕಾರಿನ ವಿಂಡ್ ಸ್ಕ್ರೀನ್ ಅನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ. ಕರೂರ್ನಲ್ಲಿ ಸೆಂಥಿಲ್ ಅವರ ಸಹೋದರ ಅಶೋಕ್ಗೆ ಸೇರಿದ ಸ್ಥಳದಲ್ಲಿ ಪರಿಶೀಲನೆ ನಡೆಸಲು ಬಂದಾಗ ಐಟಿ ಅಧಿಕಾರಿಗಳ ಕಾರಿನ ಮೇಲೆ ಸೆಂಥಿಲ್ ಬೆಂಬಲಿಗರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ರಾಮಕೃಷ್ಣಪುರಂನಲ್ಲಿನ ಅಶೋಕ್ ಮನೆಗೆ ಐಟಿ ಅಧಿಕಾರಿಗಳು ಬೆಳಿಗ್ಗೆ ತೆರಳಿದ್ದರು. ಆದರೆ ಅದಕ್ಕೆ ಬಾಗಿಲು ಹಾಕಿದ್ದರಿಂದ ಅಧಿಕಾರಿಗಳು ಹೊರಗೆ ಕಾಯುವಂತಾಯಿತು.
ಈ ವೇಳೆ ಕರೂರು ಪಾಲಿಕೆ ಮೇಯರ್ ಕವಿತಾ ಗಣೇಶನ್ ನೇತೃತ್ವದಲ್ಲಿ ಸ್ಥಳಕ್ಕೆ ಆಗಮಿಸಿದ 200ಕ್ಕೂ ಹೆಚ್ಚು ಡಿಎಂಕೆ ಬೆಂಬಲಿಗರು, ಐಟಿ ಅಧಿಕಾರಿಗಳನ್ನು ಪ್ರಶ್ನಿಸಲಾರಂಭಿಸಿದರು. ಅಧಿಕಾರಿಗಳಿಗೆ ತಮ್ಮ ಐಡಿ ಕಾರ್ಡ್ ತೋರಿಸುವಂತೆ ಆಗ್ರಹಿಸಿದರು. ಆದರೆ ಅಧಿಕಾರಿಗಳು ಅದಕ್ಕೆ ನಿರಾಕರಿಸಿದ್ದರಿಂದ ಅಲ್ಲಿ ಮಾತಿನ ಚಕಮಕಿ ನಡೆಯಿತು.
ತಮಿಳುನಾಡಿನಲ್ಲಿ ಅವಳಿ ಕಳ್ಳಬಟ್ಟಿ ದುರಂತಗಳು ಸಂಭವಿಸಿದ ಹಿನ್ನೆಲೆಯಲ್ಲಿ ಸೆಂಥಿಲ್ ಅವರು ಟೀಕೆಗೆ ಗುರಿಯಾಗಿದ್ದರು. ಹಣಕ್ಕಾಗಿ ಕೆಲಸ ಹಗರಣ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ಸೆಂಥಿಲ್ ವಿರುದ್ಧದ ತನಿಖೆ ಮುಂದುವರಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಹೀಗಾಗಿ ಅವರನ್ನು ಸಚಿವ ಸ್ಥಾನದಿಂದ ಕಿತ್ತುಹಾಕಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದ್ದವು.
ಸಿಎಂ ಎಂಕೆ ಸ್ಟಾಲಿನ್ ಅವರು ಅಧಿಕೃತ ವಿದೇಶ ಪ್ರವಾಸದಲ್ಲಿ ಇರುವ ಸಂದರ್ಭದಲ್ಲಿ ಡಿಎಂಕೆಯ ಪ್ರಬಲ ನಾಯಕನಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಈ ಐಟಿ ದಾಳಿ ನಡೆದಿದೆ.
ತಮಿಳುನಾಡು ಮತ್ತು ಕರ್ನಾಟಕದಲ್ಲಿ ಕಳೆದ ತಿಂಗಳು ರಿಯಲ್ ಎಸ್ಟೇಟ್ ಕಂಪೆನಿ ‘ಜಿ ಸ್ಕ್ವೇರ್ ರಿಯಾಲ್ಟರ್ ಪ್ರೈವೇಟ್ ಲಿಮಿಟೆಡ್’ಗೆ ಸೇರಿದ ಸುಮಾರು 50 ಸ್ಥಳಗಳಲ್ಲಿ ಐಟಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಅದಕ್ಕೂ ಮುಂಚೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಡಿಎಂಕೆ ಸದಸ್ಯರ ಮಾಲೀಕತ್ವದ ಆಸ್ತಿಗಳ ವಿವರಗಳನ್ನು ಬಿಡುಗಡೆ ಮಾಡಿದ್ದರು. ಈ ಎಲ್ಲ ಆರೋಪಗಳು ಸುಳ್ಳು ಮತ್ತು ಆಧಾರರಹಿತ ಎಂದು ರಾಜಕಾರಣಿಗಳ ಜತೆಗಿನ ತನ್ನ ನಂಟಿನ ಆರೋಪಗಳನ್ನು ರಿಯಲ್ ಎಸ್ಟೇಟ್ ಕಂಪೆನಿ ನಿರಾಕರಿಸಿತ್ತು.
ಐಟಿ ಅಧಿಕಾರಿಗಳ ಕಾರಿನ ಮೇಲೆ ದುಷ್ಕರ್ಮಿಗಳಿಂದ ದಾಳಿ
