ಬೆಂಗಳೂರು: ನಗರದ ಕಂಠೀರವ ಸ್ಟೇಡಿಯಂ ನಲ್ಲಿ ನಡೆಯಲಿರುವ ಪದಗ್ರಹಣ ಕಾರ್ಯಕ್ರಮಕ್ಕೆ ಈಗಾಗಲೇ ಅಭಿಮಾನಿಗಳ ದಂಡು ಆಗಮಿಸಿದ್ದು, ನೂಕುನುಗ್ಗಲು ಕೂಡ ಉಂಟಾಗಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಜೊತೆ 8 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಮಧ್ಯಾಹ್ನ 12.30ರ ಸುಮಾರಿಗೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳ ದಂಡು ಹರಿದುಬಂದಿದೆ.
ಸದ್ಯ ಸ್ಟೇಡಿಯಂನ ಪ್ರವೇಶ ದ್ವಾರವನ್ನು ಸಾರ್ವಜನಿಕರಿಗಾಗಿ ಓಪನ್ ಮಾಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನ ಒಳಗಡೆ ನುಗ್ಗಿದ್ದಾರೆ. ಸಾರ್ವಜನಿಕರನ್ನು ಕಂಟ್ರೋಲ್ ಮಾಡಲು ಪೊಲೀಸರ ಸಾಹಸಪಡಬೇಕಾಯಿತು. ತಳ್ಳಾಟದಲ್ಲಿ ಒಬ್ಬರು ಅಸ್ವಸ್ಥರಾಗಿ ಕೆಳಗಡೆ ಬಿದ್ದ ಪ್ರಸಂಗ ನಡೆದಿದೆ. ಓರ್ವ ಪೊಲೀಸ್ಗೂ ಗಾಯಗಳಾಗಿದೆ. ಕೂಡಲೇ ಪೊಲೀಸರು ಗಾಯಾಳುಗಳನ್ನು ಎತ್ತಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ಕಂಠೀರವ ಸ್ಟೇಡಿಯಂ ಹೊರಭಾಗದಲ್ಲಿ ಅಭಿಮಾನಿ, ಕಾರ್ಯಕರ್ತರು ಸಿದ್ದರಾಮಯ್ಯ ಅವರಿಗೆ ಜೈಕಾರ ಹಾಕಿ ಸಂಭ್ರಮ ಪಡುತ್ತಿದ್ದಾರೆ. ಕುಣಿದು ಕುಪ್ಪಳಿಸುತ್ತಿದ್ದಾರೆ. ಕಂಠೀರವ ರಸ್ತೆ ಫುಲ್ ಫ್ಲೆಕ್ಸ್ ಮಯವಾಗಿದ್ದು, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿಕೆಶಿಯ ಆಳೆತ್ತರದ ಕಟೌಟ್ ಹಾಕಿದ್ದಾರೆ. ಇಡೀ ರಸ್ತೆಯಲ್ಲಿ ನಾಯಕರಿಗೆ ಶುಭಾಶಯ ಕೋರಿ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ರಕ್ಷಾ ರಾಮಯ್ಯ ಹಾಗೂ ನಲಪಾಡ್ ಟೀಂ ನಿಂದ ಇಡೀ ರಸ್ತೆಯಲ್ಲಿ ಫ್ಲೆಕ್ಸ್ ಹಾಕಿ ಶುಭಾಶಯ ಕೋರಲಾಗಿದೆ.
ಕಂಠೀರವ ಸ್ಟೇಡಿಯಂ ಅಭಿಮಾನಿಗಳಿಂದ ನೂಕುನುಗ್ಗಲು- ಇಬ್ಬರಿಗೆ ಗಾಯ
