ಬೆಂಗಳೂರು:- ಕರ್ನಾಟಕ ವಿಧಾನಸಭೆ ಚುನಾವಣೆ ಕಣ ರಂಗೇರಿದೆ. ಸುದೀಪ್ ಸೇರಿದಂತೆ ಹಲವು ನಟರ ನಾನಾ ಪಕ್ಷಗಳ ಪರ ಪ್ರಚಾರ ಮಾಡುತ್ತಿದ್ದಾರೆ. ಆದರೆ, ನಟಿ ಲೀಲಾವತಿ ಮತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಮೇ 10ರಂದು ಮತದಾನ ದಿನಾಂಕ ಘೋಷಣೆ ಆಗಿದ್ದರೂ, ಚುನಾವಣೆ ಆಯೋಗ ಹಿರಿಯ ನಾಗರೀಕರಿಗೆ ವಿಶೇಷ ಸೌಲಭ್ಯ ಕಲ್ಪಿಸಿರುವುದರಿಂದ ಇಂದು ಲೀಲಾವತಿ ಅವರು ಮತದಾನ ಮಾಡಿದ್ದಾರೆ. ಈ ಬಾರಿಯ ಮತದಾನ ಮಾಡಿದ ಮೊದಲ ನಟಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಎಂಬತ್ತು ವರ್ಷ ತುಂಬಿದ ನಾಗರೀಕರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದೆ ಚುನಾವಣೆ ಆಯೋಗ. ಇದರ ಅಡಿಯಲ್ಲಿ ಹಿರಿಯ ನಟಿ ಲೀಲಾವತಿ, ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಮನೆಯಲ್ಲಿ ಮತದಾನ ಮಾಡಿದ್ದಾರೆ. ಮಗ ವಿನೋದ್ ರಾಜ್ ಸಹಾಯದಿಂದ ಅವರು ಮನೆಯಲ್ಲಿ ಮತದಾನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಲೀಲಾವತಿ, ‘ಚುನಾವಣೆ ಆಯೋಗ ಈ ಅವಕಾಶ ಕಲ್ಪಿಸಿದ್ದು ನನ್ನಂತಹ ಹಿರಿಯರಿಗೆ ಅನುಕೂಲವಾಗಿದೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಎಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಭಾಗಿಯಾಗಿ’ ಎಂದು ಹೇಳಿದರು. ಮತದಾನ ಮನೆಯಲ್ಲೇ ಮಾಡಿದ್ದು ಸಂಭ್ರಮ ತಂದಿದೆ ಎಂದಿದ್ದಾರೆ. ಚುನಾವಣಾ ಅಧಿಕಾರಿಗಳ ಸಮ್ಮುಖದಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿದೆ.