ಬೆಂಗಳೂರು: ಬಹುಮತಗಳಿಂದ ಗೆದ್ದು ಗದ್ದುಗೆ ಏರಲು ತಯಾರಾಗಿರುವ ಕಾಂಗ್ರೆಸ್ಗೆ ಈಗ ಮುಖ್ಯಮಂತ್ರಿ ಕುರ್ಚಿ ತಲೆನೋವಾಗಿ ಪರಿಣಮಿಸಿದೆ. ಒಂದು ಕಡೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದರೆ ಇನ್ನೊಂದು ಕಡೆ ಸಿದ್ದರಾಮಯ್ಯ ಕುರ್ಚಿಗಾಗಿ ಪಟ್ಟು ಹಿಡಿದಿದ್ದಾರೆ.
ಸಿದ್ದರಾಮಯ್ಯ ವಾದ ಏನು?
ಎಲ್ಲಾ ಕೆಲಸವನ್ನು ಪಕ್ಷದ ಅಧ್ಯಕ್ಷರೆ ಮಾಡಿದ್ದಾರೆ ಎನ್ನುವುದಾದರೆ, ಅವರು ಒಬ್ಬರೇ ಪ್ರಚಾರ ಮಾಡಬಹುದಿತ್ತು. ನಾನು ಚುನಾವಣಾ ಪ್ರಚಾರಕ್ಕೆ ಹೋಗುವ ಅಗತ್ಯ ಇರಲಿಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಜನಪರವಾಗಿ ಮಾಡಲಾದ ಕೆಲಸಗಳು ಕೈ ಹಿಡಿದಿವೆ. ನನ್ನ ವರ್ಚಸ್ಸು ಜನರನ್ನು ಕಾಂಗ್ರೆಸ್ ಕಡೆಗೆ ತಿರುಗುವಂತೆ ಮಾಡಿದೆ ಎಂದು ಸಿದ್ದರಾಮಯ್ಯ ವಾದಿಸಿದ್ದಾರೆ.
ಒಬ್ಬರ ನೇತೃತ್ವದಲ್ಲಿ ಚುನಾವಣೆ ನಡೆದಿಲ್ಲ. ನಾನು ಡಿ.ಕೆ ಶಿವಕುಮಾರ್ ಸೇರಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದೇವೆ. ನನ್ನ ಕೈಲಾದ ಮಟ್ಟಿಗೆ ಅಭ್ಯರ್ಥಿಗಳಿಗೆ ಆರ್ಥಿಕ ನೆರವು ನೀಡಿದ್ದೇನೆ. ಇಬ್ಬರ ಶ್ರಮದಿಂದ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ನಾನು ಪೂರ್ಣ 5 ವರ್ಷದ ಅವಧಿಗೆ ಸಿಎಂ ಸ್ಥಾನ ಕೇಳುತ್ತಿಲ್ಲ. ನಾನು ರಾಜಿ ಆಗಿದ್ದೇನೆ, ಡಿಕೆಶಿಯೂ ರಾಜಿ ಆಗಬೇಕು ಎಂದಿದ್ದಾರೆ.
ಪಕ್ಷ ಘೋಷಿಸಿದ್ದ ಗ್ಯಾರಂಟಿಗಳು ಚುನಾವಣೆಯಲ್ಲಿ ಕೈ ಹಿಡಿದಿದೆ. ಬಡವರ ಪರವಾದ ಆ ಯೋಜನೆಗಳ ಜಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಈಡೇರಿಸುತ್ತಾರೆ ಎಂದು ಜನ ಮತ ಹಾಕಿದ್ದಾರೆ. ಅಹಿಂದ ವರ್ಗದ ಮತಗಳು ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದೆ. ನಮಗೆ ಸಿಕ್ಕ ಮತಗಳ ವಿವರವನ್ನು ಪರಿಶೀಲಿಸಿದರೆ ಈ ಬಗ್ಗೆ ಅರಿವಾಗುತ್ತದೆ. ಅಲ್ಲದೆ ಶಾಸಕರ ಹೆಚ್ಚಿನ ಬೆಂಬಲ ನನಗೆ ಇದೆ ಎನ್ನುವ ನಂಬಿಕೆ ಇದೆ. ಬೇಕಾದರೆ ಬಹಿರಂಗವಾಗಿ ಇನ್ನೊಮ್ಮೆ ಆಯ್ಕೆ ನಡೆಯಲಿ ಎಂದು ಸವಾಲು ಹಾಕಿದ್ದಾರೆ.