ಕೆಲವರಿಗೆ ರೆಸ್ಟೋರೆಂಟ್ಗೆ ಹೋದರೆ ಊಟಕ್ಕೂ ಮೊದಲು ಸೂಪ್ ಕುಡಿಯುವ ಅಭ್ಯಾಸವಿರುತ್ತದೆ. ಸೂಪ್ ಕುಡಿಯುವುದರಿಂದ ನಮ್ಮ ಜೀರ್ಣಶಕ್ತಿ ಹೆಚ್ಚಿಸುತ್ತದೆ. ಹೀಗಾಗಿ ಊಟಕ್ಕೂ ಮೊದಲು ಸೂಪ್ ಕುಡಿಯುವುದು ಒಳ್ಳೆಯ ಅಭ್ಯಾಸ. ಸೂಪ್ಗಳಲ್ಲಿ ಅನೇಕ ರೀತಿಯ ಸೂಪ್ಗಳಿರುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಕಾರ್ನ್ ಸೂಪ್ ಮಾಡುವುದು ಹೇಗೆ ಎಂದು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ದರೆ ಇದನ್ನು ಯಾವ ರೀತಿ ಮಾಡುವುದು ಎಂದು ತಿಳಿದುಕೊಳ್ಳೋಣ.
ಬೇಕಾಗುವ ಸಾಮಗ್ರಿಗಳು:
ಸ್ವೀಟ್ ಕಾರ್ನ್ – ಅರ್ಧ ಕಪ್
ಸಣ್ಣಗೆ ಹೆಚ್ಚಿದ ಶುಂಠಿ- 1 ಚಮಚ
ಸಣ್ಣಗೆ ಹೆಚ್ಚಿದ ಕ್ಯಾರೆಟ್- ಕಾಲು ಕಪ್
ವಿನೇಗರ್- 1 ಚಮಚ
ಬೆಣ್ಣೆ- 2 ಚಮಚ
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ- 1 ಚಮಚ
ಹೆಚ್ಚಿದ ಸ್ಪ್ರಿಂಗ್ ಆನಿಯನ್- 5 ಚಮಚ
ಜೋಳದ ಹಿಟ್ಟು- 1 ಚಮಚ
ಬ್ಲ್ಯಾಕ್ ಪೆಪ್ಪರ್- ಕಾಲು ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಮೊದಲಿಗೆ ಒಂದು ಪ್ಯಾನ್ನಲ್ಲಿ ಬೆಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಬೆಣ್ಣೆ ಕರಗಿದ ಬಳಿಕ ಅದಕ್ಕೆ ಹೆಚ್ಚಿದ ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಹಾಕಿಕೊಂಡು ಅದರ ಹಸಿವಾಸನೆ ಹೋಗುವವರೆಗೂ ಬಾಡಿಸಿಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ಸ್ಪ್ರಿಂಗ್ ಆನಿಯನ್ ಹಾಕಿ ತಿರುವಿಕೊಳ್ಳಬೇಕು. ಈಗ ಅದಕ್ಕೆ ಕಾಲು ಕಪ್ ಸ್ವೀಟ್ ಕಾರ್ನ್ ಹಾಗೂ ಕ್ಯಾರೆಟ್ ಅನ್ನು ಹಾಕಿಕೊಂಡು 3ರಿಂದ 4 ನಿಮಿಷಗಳವರೆಗೆ ಫ್ರೈ ಮಾಡಿಕೊಳ್ಳಿ.
ಬಳಿಕ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಚೆನ್ನಾಗಿ ತಿರುವಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಉಳಿದ ಕಾಲು ಕಪ್ ಜೋಳವನ್ನು ಹಾಕಿಕೊಂಡು ಅದಕ್ಕೆ 2 ಚಮಚ ನೀರನ್ನು ಸೇರಿಸಿಕೊಳ್ಳಿ. ಈಗ ಅದನ್ನು ದಪ್ಪ ಪೇಸ್ಟ್ ಆಗುವಂತೆ ಚನ್ನಾಗಿ ರುಬ್ಬಿಕೊಳ್ಳಬೇಕು.
ರುಬ್ಬಿದ ಪೇಸ್ಟ್ ಅನ್ನು ಪ್ಯಾನ್ಗೆ ತರಕಾರಿ ಫ್ರೈ ಮಾಡಿರುವ ಪ್ಯಾನ್ಗೆ ಹಾಕಿಕೊಂಡು 3ರಿಂದ 4 ನಿಮಿಷಗಳ ಕಾಲ ಚನ್ನಾಗಿ ತಿರುವಿಕೊಳ್ಳಿ. ಬಳಿಕ ಇದಕ್ಕೆ 3 ಕಪ್ ನೀರನ್ನು ಸೇರಿಸಿಕೊಂಡು ಚೆನ್ನಾಗಿ ಕುದಿಸಿಕೊಳ್ಳಿ. ನಂತರ ಒಂದು ಮುಚ್ಚಳದ ಸಹಾಯದಿಂದ ಇದನ್ನು ಮುಚ್ಚಿ 10 ರಿಂದ 12 ನಿಮಿಷಗಳವರೆಗೆ ಬೇಯಿಸಿಕೊಳ್ಳಿ. ಈಗ ಇದಕ್ಕೆ 1 ಚಮಚ ಜೋಳದ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿಕೊಂಡು ಮತ್ತೆ 5 ನಿಮಿಷಗಳವರೆಗೆ ಕುದಿಸಿಕೊಳ್ಳಿ.
ಕೊನೆಯಲ್ಲಿ ಇದಕ್ಕೆ ವಿನೇಗರ್ ಬ್ಲ್ಯಾಕ್ ಪೆಪ್ಪರ್ ಪೌಡರ್ ಹಾಗೂ ಉಳಿದ ಸ್ಪ್ರಿಂಗ್ ಆನಿಯನ್ ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ. ಈಗ ಕಾರ್ನ್ ಸೂಪ್ ಸವಿಯಲು ಸಿದ್ಧ. ಇದನ್ನು ಸರ್ವಿಂಗ್ ಬೌಲ್ಗೆ ಹಾಕಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ.