ನವದೆಹಲಿ: ಪ್ರಾಥಮಿಕ ಕೃಷಿಪತ್ತಿನ ಸೊಸೈಟಿಗಳಿಗೆ ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಡೀಲರ್ಶಿಪ್ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.
ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಮತ್ತು ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಪುರಿ ನಡುವೆ ಬುಧವಾರ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ದೇಶದ ಸಹಕಾರ ವಲಯಕ್ಕೆ ಇನ್ನಷ್ಟು ಬಲ ತುಂಬಲು ಸರ್ಕಾರ ಮುಂದಾಗಿದೆ.
ಈಗಾಗಲೇ ಪೆಟ್ರೋಲ್/ ಡೀಸೆಲ್ ಸಗಟು ಗುತ್ತಿಗೆ ಹೊಂದಿರುವ ಸೊಸೈಟಿಗಳಿಗೆ ಅದನ್ನು ಚಿಲ್ಲರೆ ಮಾರಾಟ ಮಳಿಗೆಗಳಾಗಿ ಬದಲಾಯಿಸುವ ಒಂದು ಬಾರಿಯ ಅವಕಾಶವನ್ನೂ ನೀಡಲು ನಿರ್ಧರಿಸಿದೆ ಎಂದು ಉಭಯ ಸಚಿವಾಲಯಗಳು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿವೆ.
ಸಕ್ಕರೆ ಸಹಕಾರಿ ಕಾರ್ಖಾನೆಗಳಿಗೆ ಎಥೆನಾಲ್ ಮಿಶ್ರಣ ಯೋಜನೆಯ ಅಡಿ ಎಥೆನಾಲ್ ಮಾರಾಟ ಮಾಡುವ ಅನುಮತಿಯನ್ನು ಆದ್ಯತೆಯ ಮೇರೆಗೆ ನೀಡಲಾಗುತ್ತದೆ.
ದೇಶದ ಸಹಕಾರ ವಲಯಕ್ಕೆ ಬಲ ತುಂಬಲು 25 ವಿವಿಧ ಯೋಜನೆಗಳ ಮೂಲಕ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಗಳನ್ನು ಗ್ರಾಮೀಣ ಅರ್ಥಿಕಾಭಿವೃದ್ಧಿ ಕೇಂದ್ರಗಳನ್ನಾಗಿ ಪರಿವರ್ತಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.