ಚಾಮರಾಜನಗರ:- ಭಾರೀ ಮಳೆ ಹಿನ್ನೆಲೆ ಕೇರಳದ ವೈನಾಡು ಭಾಗದಲ್ಲಿ ಭೂಕುಸಿತ ಸಂಭವಿಸಿ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಗುಂಡ್ಲುಪೇಟೆ-ಕೇರಳ ರಸ್ತೆ ಸಂಪರ್ಕ ಕಡಿತವಾಗಿದೆ.
ಭಾರೀ ಮಳೆಯಿಂದ ಕೇರಳದ ಮುತ್ತಂಗ ಚೆಕ್ ಪೋಸ್ಟ್ನಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಇಂದು (ಜುಲೈ ೩೦) ಸಂಜೆ ೫ ಗಂಟೆಯಿಂದಲೇ ಗುಂಡ್ಲುಪೇಟೆಯಿಂದ ವೈನಾಡು, ಬತ್ತೇರಿಗೆ ತೆರಳುವ ರಸ್ತೆ ಮಾರ್ಗ ಬಂದ್ ಮಾಡಲಾಗಿದೆ. ಹಾಗೆಯೇ ತಮಿಳುನಾಡಿನ ಮೂಲಕ ಕೇರಳಕ್ಕೆ ತೆರಳಲು ಬದಲಿ ಮಾರ್ಗವನ್ನು ಸೂಚಿಸಲಾಗಿದೆ.
ವೈನಾಡಿನಲ್ಲಿ ಗುಡ್ಡ ಕುಸಿತ ಪ್ರಕರಣ ಹಿನ್ನೆಲೆ ಚಾಮರಾಜನಗರ ಜಿಲ್ಲಾಡಳಿತದಿಂದ ಸಹಾಯವಾಣಿ ಆರಂಭ ಮಾಡಲಾಗಿದೆ. ವೈನಾಡು, ಬತ್ತೇರಿ ಭಾಗಕ್ಕೆ ಕೂಲಿ ಅರಸಿ ಹೋಗಿರುವ ಚಾಮರಾಜನಗರ, ಗುಂಡ್ಲುಪೇಟೆ ಜನರಿಗೆ ಅನುಕೂಲ ಆಗುವ ದೃಷ್ಟಿಯಿಂದ ಈ ಸಹಾಯವಾನಿಯನ್ನು ಆರಂಭಿಸಲಾಗಿದೆ.
ಇನ್ನು ಈಗಾಗಲೇ ಗುಂಡ್ಲುಪೇಟೆ ತಹಶಿಲ್ದಾರ್ ತಂಡ ಕೇರಳಕ್ಕೆ ತೆರಳಿದ್ದು, ಗುಡ್ಡ ಕುಸಿತದಲ್ಲಿ ಗಡಿಜಿಲ್ಲೆ ಜನರು ಸಿಲುಕಿರುವ, ನಿರಾಶ್ರಿತರಾಗಿರುವ ಬಗ್ಗೆ ಮಾಹಿತಿ ಕಲೆಹಾಕುವ ಕೆಲಸ ಆರಂಭಿಸಿದೆ ಎಂದು ತಿಳಿದುಬಂದಿದೆ.
ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಪ್ರವಾಸ, ಜೀವನೋಪಾಯ ಹಾಗೂ ಇನ್ನಿತರೆ ಕಾರಣಕ್ಕೆ ತೆರಳಿರುವವರ ಮಾಹಿತಿಯನ್ನು ಅವರ ಕುಟುಂಬಸ್ಥರು ತಿಳಿಸಿದ್ದಲ್ಲಿ ಸುರಕ್ಷಿತವಾಗಿ ಕರೆತರಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲಾಡಳಿತದ ವತಿಯಿಂದ ತೆರೆದಿರುವ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: ೦೮೨೨೬-೨೨೩೧೬೩, ೦೮೨೨೬-೨೨೩೧೬೧, ೦೮೨೨೬-೨೨೩೧೬೦ ಹಾಗೂ ಮೊಬೈಲ್ ಸಂಖ್ಯೆ ೯೭೪೦೯೪೨೯೦೧ಗೆ ಸಂಪರ್ಕಿಸಬಹುದಾಗಿದೆ.
ಕೇರಳದಲ್ಲಿ ಭಾರೀ ಮಳೆ: ಗುಂಡ್ಲುಪೇಟೆ-ಕೇರಳ ರಸ್ತೆ ಸಂಪರ್ಕ ಬಂದ್
