ಮೈಸೂರು: ಜಾರ್ಖಂಡ್ನ ಕಾಂಗ್ರೆಸ್ ರಾಜ್ಯಸಭಾ ಸದಸ್ಯನ ಮನೆಯಲ್ಲಿ ಐಟಿ ದಾಳಿ ವೇಳೆ ನೂರಾರು ಕೋಟಿ ಹಣ ಪತ್ತೆ ಆಗಿರುವುದು ಕಾಂಗ್ರೆಸ್ ಪಕ್ಷದ ಭ್ರಷ್ಟಚಾರದ ಪ್ರತೀಕ ಎಂದು ಆರೋಪಿಸಿ ಮೈಸೂರಿನಲ್ಲಿ ಬಿಜೆಪಿ ನಗರ ಮತ್ತು ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟಿಸಿದರು ಪ್ರತಿಭಟಿಸಿದರು.
ನಗರದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟಿಸಿದ ನೂರಾರು ಮಂದಿ ಕಾಂಗ್ರೆಸ್ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಭ್ರಷ್ಟಾಚಾರದ ಜನಕ ಕಾಂಗ್ರೆಸ್ ಎಂಬ ಭಿತ್ತಿಪತ್ರ ಪ್ರದರ್ಶಿಸಿದರು.
ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಸಿದ್ದರಾಮಯ್ಯನವರು ಕಾಂಗ್ರೆಸ್ ನವರ ಮೇಲೆ ಮಾತ್ರ ಐಟಿ ದಾಳಿ ಆಗುತ್ತಿದ್ದೆ ಎನ್ನುತ್ತಾರೆ. ಅವರಿಗೆ ಬಿಜೆಪಿಯವರ ಅಕ್ರಮ ಆಸ್ತಿ ಇದೆ ಎಂಬ ಮಾಹಿತಿ ಇದ್ದರೆ ದೂರು ನೀಡಲಿ. ತಮ್ಮ ಭ್ರಷ್ಟಾಚಾರ ಮುಚ್ಚಿಟ್ಟುಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡುತ್ತಾರೆ. ಗ್ಯಾರಂಟಿ ಯೋಜನೆ ಮೂಲಕ ಲೋಕಸಭಾ ಚುನಾವಣೆಗೆ ಹಣ ಸಂಗ್ರಹ ಮಾಡುತ್ತಿದ್ದಾರೆ. ಈ ರೀತಿ ಏನೇ ಮಾಡಿದರೂ ಪ್ರಧಾನಿ ಮೋದಿಯವರನ್ನ ಸೋಲಿಸಲಿಕ್ಕೆ ಆಗುವುದಿಲ್ಲ. ಕಾಂಗ್ರೆಸ್ ವಕ್ತಾರರಾದ ಲಕ್ಷ್ಮಣ್ ಸುಮ್ಮನೆ ಬಿಜೆಪಿ ಮೇಲೆ ಆರೋಪ ಮಾಡುತ್ತಾರೆ. ಅವರಿಗೆ ಪ್ರಚಾರದ ಹುಚ್ಚು ಇದೆ ಎಂದರು.
ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಮಾತನಾಡಿ, ಸಂಸದ ಪ್ರತಾಪಸಿಂಹ ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಯೋಜನೆಗಳನ್ನು ಸಹಿಸಲು ಕಾಂಗ್ರೆಸ್ಗೆ ಆಗುತ್ತಿಲ್ಲ. ಹೀಗಾಗಿ ಆಧಾರವಿಲ್ಲದ ಆರೋಪಗಳ ಮೂಲಕ ರಾಜಕೀಯ ಮಾಡುತ್ತಿದ್ದಾರೆಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ಮೈಸೂರು ಬಿಜೆಪಿ ವಿಭಾಗೀಯ ಉಸ್ತುವಾರಿ ಮೈ.ವಿ.ರವಿಶಂಕರ್, ಮುಡಾ ಮಾಜಿ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ್ಗೌಡ, ಹೇಮಂತ್ಕುಮಾರ್ಗೌಡ, ಬಿ.ವಿ.ಮಂಜುನಾಥ್, ಮಾಜಿ ಮಹಾಪೌರ ಸಂದೇಶ್ಸ್ವಾಮಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಮುಡಾ ಮಾಜಿ ಸದಸ್ಯ ಲಕ್ಷ್ಮಿ, ನಗರ ಪ್ರಧಾನ ಕಾರ್ಯದರ್ಶಿ ಗಿರಿಧರ್, ಕೃಷ್ಣಪ್ಪಗೌಡ ಇನ್ನಿತರರು ಉಪಸ್ಥಿತರಿದ್ದರು.