ಮದ್ದೂರು:- ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಕ್ಯಾಂಟರ್ಗೆ ಸ್ಕೂಟರ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ತಾಯಿ ಸ್ಥಳದಲ್ಲೇ ಮೃತಪಟ್ಟು, ಮಗ ಮತ್ತು ಮೊಮ್ಮಗಳು ತೀವ್ರ ಗಾಯಗೊಂಡಿರುವ ಘಟನೆ ಪಟ್ಟಣ ಸಮೀಪದ ಕೆ.ಕೋಡಿಹಳ್ಳಿ ಗ್ರಾಮದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಬುಧವಾರ ಸಂಜೆ ಜರುಗಿದೆ.
ರಾಮನಗರ ಜಿಲ್ಲೆ, ಚನ್ನಪಟ್ಟಣದ ಮಂಡಿಪೇಟೆ ನಿವಾಸಿಗಳಾದ ವರಲಕ್ಷ್ಮಿ (60) ಮೃತಪಟ್ಟಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಆಕೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ವರಲಕ್ಷ್ಮಿ ಪುತ್ರ ಸುಧಾಕರ್ (40) ಆಕೆಯ ಮೊಮ್ಮಗಳು ಗೌತಮಿ (10) ತೀವ್ರವಾಗಿ ಗಾಯಗೊಂಡಿದ್ದು, ಮದ್ದೂರು ಆಸ್ಪತ್ರೆ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತ ವರಲಕ್ಷ್ಮಿ ಸುಧಾಕರ್, ಮೊಮ್ಮಗಳು ಗೌತಮಿ ಜೊತೆ ಮಂಡ್ಯದ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿದ್ದ ತಮ್ಮ ಸಂಬಂಧಿಕರನ್ನು ನೋಡಿಕೊಂಡು ಚನ್ನಪಟ್ಟಣಕ್ಕೆ ಹೋಂಡಾ ಆಕ್ಟೀವಾ ಸ್ಕೂಟರ್ನಲ್ಲಿ ವಾಪಸ್ಸಾಗುತ್ತಿದ್ದರು. ಮದ್ದೂರು ಬೈಪಾಸ್ ರಸ್ತೆಯ ಕೆ. ಕೋಡಿಹಳ್ಳಿ ಸಮೀಪದ ಹೆದ್ದಾರಿಯಲ್ಲಿ ಪಂಚರ್ ಆಗಿ ನಿಂತಿದ್ದ ಕ್ಯಾಂಟರ್ ವಾಹನಕ್ಕೆ ವೇಗವಾಗಿ ಬಂದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ನಲ್ಲಿ ಹಿಂಬದಿ ಕುಳಿತಿದ್ದ ವರಲಕ್ಷ್ಮಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರಳೆದಿದ್ದಾರೆ. ಸುಧಾಕರ್ ಮತ್ತು ಗೌತಮಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತವನ್ನು ಕಂಡ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.
ವರಲಕ್ಷ್ಮಿ ಶವವನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕ್ಯಾಂಟರ್ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.