ಮಡಿಕೇರಿ: ಪ್ರವಾಸಕ್ಕೆಂದು ಬಂದ ಪ್ರವಾಸಿಗರ ಮೇಲೆ ಕ್ಷುಲ್ಲಕ ಕಾರಣಕ್ಕೆ ಪಾರ್ಕಿಂಗ್ ಸುಂಕ ವಸೂಲಿಗಾರರು ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಮಡಿಕೇರಿಯ ಅಬ್ಬಿ ಫಾಲ್ಸ್ನಲ್ಲಿ ನಡೆದಿದೆ.
ಹಲ್ಲೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ಒಂದು ವಾರದ ಹಿಂದೆ ಆಟೋ ಡ್ರೈವರ್ ಒಬ್ಬರಿಗೆ ಇದೇ ರೀತಿ ಹಲ್ಲೆ ನಡೆಸಲಾಗಿತ್ತು. ಹೀಗೇ ಹಲವು ಬಾರಿ ಪ್ರವಾಸಿಗರ ಮೇಲೆ ಇಲ್ಲಿನ ಸುಂಕ ವಸೂಲಿಗಾರರು ಹಲ್ಲೆ ನಡೆಸುತ್ತಿದ್ದಾರೆ ಎಂಬ ಆರೋಪ ಆಗಾಗ ಕೇಳಿ ಬರುತ್ತಿದೆ. ಆದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೇ ಪ್ರವಾಸಿ ತಾಣವಾದ ಕೊಡಗಿಗೆ ಯಾವುದೇ ಪ್ರವಾಸಿಗರು ಬರದಂತೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ದೂರದ ಊರಿನಿಂದ ಬರುವ ಪ್ರವಾಸಿಗರು ಹಲ್ಲೆಗೊಳಗಾದರೂ ಯಾವುದೇ ದೂರು ನೀಡದೇ ವಾಪಸ್ ತೆರಳುತ್ತಾರೆ. ದೂರು ನೀಡಿದರೆ ಮತ್ತೆ ಪುನಃ ಇಲ್ಲಿಯ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಕ್ಕೆ ಹಾಜರಾಗಬೇಕಾದ ಕಷ್ಟದಿಂದ ಇದುವರೆಗೂ ಹಲ್ಲೆಗೊಳಗಾದ ಪ್ರವಾಸಿಗಳು ನೇರವಾಗಿ ದೂರು ನೀಡಿಲ್ಲ. ಇದರ ಲಾಭವನ್ನು ಪಡೆದ ವಸೂಲಿಗಾರರು ದುಪ್ಪಟ್ಟು ಬೆಲೆಗೆ ಸಾಮಗ್ರಿಗಳನ್ನು ಮಾರಾಟ ಮಾಡಿ ಪ್ರವಾಸಿಗರು ಪ್ರಶ್ನಿಸಿದಾಗ ಅವರ ಮೇಲೆ ನೇರವಾಗಿ ಹಲ್ಲೆ ನಡೆಸಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಹಲವರು ಹೇಳಿದ್ದಾರೆ.
ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಕಣ್ಣುಮುಚ್ಚಿ ಕುಳಿತಿದೆ. ಪೊಲೀಸ್ ಇಲಾಖೆ ನಮಗೆ ದೂರು ಬಂದರೆ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ. ಈ ರೀತಿಯಾದ ಪ್ರಕರಣಗಳು ಹೀಗೇ ಮುಂದುವರಿದರೆ ಕೊಡಗು ಜಿಲ್ಲೆಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುವ ಸಂಭವವಿದೆ. ಈಗಾಗಲೇ ಇಂತಹ ಪ್ರಕರಣಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರವಾಸಿಗರಲ್ಲಿ ಭೀತಿಯ ವಾತಾವರಣ ನಿರ್ಮಿಸುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಇದಕ್ಕೆ ಸೂಕ್ತ ಕ್ರಮ ಕೈಗೊಂಡು ಪೊಲೀಸರನ್ನು ನಿಯೋಜಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಅಬ್ಬಿ ಫಾಲ್ಸ್ನಲ್ಲಿ ಪ್ರವಾಸಿಗರ ಮೇಲೆ ಹಲ್ಲೆ
