ಒಟ್ಟಾವ: ಮದುವೆ ಸಮಾರಂಭದಲ್ಲಿ ಅಪರಿಚಿತರು ನಡೆಸಿದ ಗುಂಡಿನ ದಾಳಿಗೆ ಪಂಜಾಬ್ ಮೂಲದ ಗ್ಯಾಂಗ್ಸ್ಟರ್ ಬಲಿಯಾಗಿರುವ ಘಟನೆ ಕೆನಡಾದ ವ್ಯಾಂಕೋವರ್ ನಗರದಲ್ಲಿ ನಡೆದಿದೆ.
ತಡರಾತ್ರಿ ಸುಮಾರು 1:30ರ ವೇಳೆಗೆ ಗುಂಡಿನ ದಾಳಿ ನಡೆದಿದ್ದು, 28 ವರ್ಷದ ಅಮರ್ ಪ್ರೀತ್ (ಚುಕ್ಕಿ) ಬಲಿಯಾಗಿದ್ದಾನೆ. ಗ್ಯಾಂಗ್ಸ್ಟರ್ಗಳಾಗಿದ್ದ ಅಮರ್ ಪ್ರೀತ್ ಸಹೋದರರಾದ ಸಮ್ರಾ ಮತ್ತು ರವೀಂದರ್ ಇಬ್ಬರೂ ಮದುವೆ ಅತಿಥಿಗಳಾಗಿ ಬಂದಿದ್ದರು. ಇದೇ ಸಮಾರಂಭಕ್ಕೆ ಕೆಲವು ಅಪರಿಚಿತ ವ್ಯಕ್ತಿಗಳೂ ಸೇರಿದಂತೆ 60 ಮಂದಿ ಹಾಜರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಉದ್ದೇಶಿತ ಗ್ಯಾಂಗ್ ವಾರ್ ಆಗಿದೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಸಹಾಯವಾಣಿ ಮೊ.ಸಂ. 6047172500ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
2022ರ ಆಗಸ್ಟ್ನಲ್ಲಿ ಕೆನಡಾ ಪೊಲೀಸರು ಗ್ಯಾಂಗ್ಸ್ಟರ್ಗಳೊಂದಿಗೆ ಸಂಪರ್ಕದಲ್ಲಿದ್ದ 11 ವ್ಯಕ್ತಿಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರು. ಅವರಲ್ಲಿ ಅಮರ್ ಪ್ರೀತ್ ಮತ್ತು ಸಹೋದರ ರವೀಂದರ್ ಸೇರಿ 9 ಮಂದಿ ಪಂಜಾಬ್ ಮೂಲದವರು ಎಂದು ತಿಳಿಸಿದ್ದರು.