ಚಾಮರಾಜನಗರ: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಯಾಗಿದೆ. ಇದೀಗ ಚಾಮರಾಜನಗರದಲ್ಲಿ ರಶ್ ಆಗಿ ಪ್ರಯಾಣಿಕರು ಬಸ್ಸಿನ ಬಾಗಿಲನ್ನೇ ಮುರಿದು ಹಾಕಿದ ಘಟನೆ ನಡೆದಿದೆ.
ಭಾನುವಾರ ಅಮವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮಲೆ ಮಹದೇಶ್ವರ ಬೆಟ್ಟದ ದರ್ಶನಕ್ಕೆ ಹೊರಟಿದ್ದರು. ಈ ವೇಳೆ ಬಂದ ಬಸ್ ಏರಲು ನೂಕು ನುಗ್ಗಲು ಉಂಟಾಗಿದೆ. ಅಲ್ಲದೇ ಪ್ರಯಾಣಿಕರು ಬಸ್ ಏರುವಾಗ ಡೋರ್ ಮುರಿದು ಹೋಗಿದೆ. ಇದರಿಂದಾಗಿ ಕಂಡಕ್ಟರ್ ಪರದಾಡಿದ್ದಾರೆ. ಅದರಲ್ಲೂ ವಾರದ ಹಿಂದಷ್ಟೆ ಸಾರಿಗೆ ನಿಗಮ ಬಾಗಿಲು ಹಾಕದೇ ಬಸ್ ಓಡಿಸದಂತೆ ಆದೇಶ ನಿಡಿತ್ತು.
ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಪರಿಣಾಮ ಯಾತ್ರಾ ಸ್ಥಳಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಅದೇ ರೀತಿ ಮಲೆ ಮಹದೇಶ್ವರ ದರ್ಶನಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದರಿಂದಾಗಿ ಕೆಎಸ್ಆರ್ಟಿಸಿ ಬಸ್ಗಳು ತುಂಬಿ ತುಳುಕುತ್ತಿವೆ. ಕೊಳ್ಳೇಗಾಲದ ಬಸ್ ನಿಲ್ದಾಣದಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೋಗುವ ಬಸ್ ಹತ್ತಲು ಪ್ರಯಾಣಿಕರು ಪರದಾಡುವಂತಾಗಿದೆ.
ಬೆಳಗ್ಗೆಯಿಂದ ಕಾದರೂ ಕೆಲವರಿಗೆ ರಷ್ನಿಂದ ಬಸ್ ಹತ್ತಲು ಆಗಿರಲಿಲ್ಲ. ನಿಲ್ದಾಣದಲ್ಲೇ ಕಾದು ನಿಲ್ಲುವಂತಾಗಿದೆ ಎಂದು ಕೆಲವರು ಗೋಳಾಡಿದ್ದಾರೆ. ಬಸ್ಗಳಲ್ಲಿ ಮಹಿಳೆಯರೇ ತುಂಬಿಕೊಳ್ಳುತ್ತಿದ್ದಾರೆ. ನಾವು ಹೇಗೆ ಹೋಗೋದು ಎಂದು ಪುರುಷರು ಅಳಲು ತೋಡಿಕೊಂಡಿದ್ದಾರೆ.