ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೋಚಕತೆಯಿಂದ ಕೂಡಿದ್ದ ಆರ್ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ವೇಳೆ ಕೊಹ್ಲಿಯ ಫ್ಲೈಯಿಂಗ್ ಕಿಸ್ಗೆ ಅನುಷ್ಕಾ ಶರ್ಮಾ ರೋಮಾಂಚನಗೊಂಡ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ನಿಂದ ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಆದರೆ ಪಂದ್ಯದ ಸಮಯದಲ್ಲಿ ಪತ್ನಿ ಅನುಷ್ಕಾ ಶರ್ಮಾ ಅವರೆಡೆಗೆ ಹಾರಿಸಿದ ಪ್ರಣಯ ಸೂಚಕ ಸಿಹಿಮುತ್ತು ಕೊಹ್ಲಿ ಪ್ರೇಮಿಗಳ ಹೃದಯಗಳನ್ನು ಗೆದ್ದಿತು. ಯಶಸ್ವಿ ಜೈಸ್ವಾಲ್ ಅವರು ಬ್ಯಾಟ್ ಬೀಸಿದಾಗ ಕೊಹ್ಲಿಯ ಕೈಗೆ ನೇರವಾಗಿ ಕ್ಯಾಚ್ ಹೋಯಿತು. ಅದೇ ಸಂಭ್ರಮದಲ್ಲಿ ಕೊಹ್ಲಿ, ಅನುಷ್ಕಾ ಅವರೆಡೆಗೆ ಆನ್ಫೀಲ್ಡ್ನಿಂದಲೇ ಸಿಹಿ ಮುತ್ತು ರವಾನಿಸಿದರು.
ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 7 ರನ್ಗಳ ರೋಚಕ ಗೆಲುವು ಸಾಧಿಸಲು ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಇಬ್ಬರಿಂದ ದಾಖಲಾದ ಶತಕ ಪ್ರಮುಖ ಪಾತ್ರವಹಿಸಿತು.
ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. 190 ರನ್ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಸೋಲೊಪ್ಪಿಕೊಂಡಿತು.