ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ ಇನ್ನು ಕೇವಲ 3 ದಿನಗಳಷ್ಟೇ ಬಾಕಿ ಉಳಿದಿದ್ದು, ಈ ನಡುವಲ್ಲೇ ಮದ್ಯಕ್ಕೆ ಬೇಡಿಕೆಗಳು ಹೆಚ್ಚಾಗಿದ್ದು, ಕೊರತೆ ಕೂಡ ಎದುರಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಮದ್ಯದ ವಹಿವಾಟು ಗಣನೀಯವಾಗಿ ವೃದ್ಧಿಸಿದ್ದು, ನೀತಿ ಸಂಹಿತೆ ಜಾರಿ ಇರುವ ಕಾರಣ ಬೇಡಿಕೆಗೆ ತಕ್ಕಂತೆ ಎಣ್ಣೆ ಪೂರೈಕೆಯಾಗುತ್ತಿಲ್ಲ. ಮೇ. 10 ರಂದು ಮತದಾನ ನಡೆಯಲಿದ್ದು, ಮತದಾನ ನಡೆಯುವ 48 ಗಂಟಗೂ ಮೊದಲೇ ಮದ್ಯದಂಗಡಿಗಳು ಬಂದ್ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಮದ್ಯಕ್ಕೆ ಬೇಡಿಕೆ ಹೆಚ್ಚಾಗಿದ್ದು, ಅಕ್ರಮ ದಾಸ್ತಾನಗಳು ಹೆಚ್ಚಾಗತೊಡಗಿದೆ.
ನಗರಕ್ಕಿಂತಲೂ ಗ್ರಾಮಗಳಲ್ಲಿ ಅಕ್ರಮ ಮದ್ಯ ದಾಸ್ತಾನು ಪ್ರಮಾಣ ಹೆಚ್ಚಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಚುನಾವಣೆ ವೇಳೆ ಮದ್ಯಕ್ಕೆ ಬೇಡಿಕೆ ಹೆಚ್ಚಾಗಲಿದ್ದು, ಈ ಸಂದರ್ಭದಲ್ಲಿ ಅಕ್ರಮ ದಾಸ್ತಾನುಗಳು ಮೂಲಕ ಮದ್ಯವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲು ಹಲವರು ಉದ್ದೇಶಿಸಿದ್ದಾರೆ.
ಹಲವು ಗ್ರಾಮಗಳಲ್ಲಿ ಸ್ಥಳೀಯ ಬ್ರಾಂಡ್ ನ ಟೆಟ್ರಾ ಪ್ಯಾಕ್ ಗಳನ್ನು 70 ರೂ.ಗೆ ಬದಲಾಗಿ 150 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಚುನಾವಣಾ ಆಯೋಗದ ನಿಯಂತ್ರಣದಿAದಾಗಿ ಅಕ್ರಮ ದಾಸ್ತಾನು ಕಡಿಮೆಯಾಗುತ್ತಿದೆ, ಆದರೆ, ಕೆಲವರು ಕಾರ್ಖಾನೆಗಳಿಂದಲೇ ನೇರವಾಗಿ ಖರೀದಿ ಮಾಡಿ ದಾಸ್ತಾನು ಮಾಡಿಕೊಳ್ಳುತ್ತಿರುವುದು ಹೆಚ್ಚಾಗಿದೆ ಎಂದು ಮದ್ಯ ಮಾರಾಟಗಾರ ಅಶೋಕ್ ಎಂಬುವವರು ಹೇಳಿದ್ದಾರೆ.
ಮತದಾನದ ದಿನದಂದು ಕಾರ್ಯಕರ್ತರಿಗೆ ಬಾಡುಟ ಹಾಕಿಸುವ ರಾಜಕೀಯ ನಾಯಕರು, ಈ ವೇಳೆ ಮದ್ಯವನ್ನು ನೀಡುತ್ತಾರೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಪೂರೈಕೆ ಮಾಡುವಂತೆ ಮದ್ಯದಂಗಡಿಯ ಮಾಲೀಕರ ಮೇಲೆ ಒತ್ತಡ ಹೇರುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಮುಂಗಡವಾಗಿಯೇ ಹಣವನ್ನು ಪಾವತಿ ಮಾಡುತ್ತಿರುವುದರಿಂದ ಅವರ ಬೇಡಿಕೆಯನ್ನು ನಿರಾಕರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗ್ರಾಹಕರಿಗೆ ಕಡಿಮೆ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವೈಸ್ ಶಾಪ್’ನ ಮಾಲೀಕರೊಬ್ಬರು ಹೇಳಿದ್ದಾರೆ.
ಮೈಸೂರು ಗ್ರಾಮಾಂತರದ ಅಬಕಾರಿ ಡಿಸಿ ಎ ರವಿಶಂಕರ್ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ತಡೆಯಲು ಗಸ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇಲ್ಲಿಯವರೆಗೆ 3 ಕೋಟಿ ರೂ.ಗೂ ಅಧಿಕ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.