ಮೈಸೂರು: ಶಾಸಕ ಜಿ.ಟಿ.ದೇವೇಗೌಡರ ಪ್ರತಿಸ್ಪರ್ಧಿಯಾಗಿ ಮಾವಿನಹಳ್ಳಿ ಸಿದ್ದೇಗೌಡರಿಗೆ ಟಿಕೇಟ್ ನೀಡುವ ಮೂಲಕ ಕಾಂಗ್ರೆಸ್ ಚಾಮುಂಡೇಶ್ವರಿಯಲ್ಲಿ ಒಕ್ಕಲಿಗರ ನಡುವಿನೆ ಕದನಕ್ಕೆ ಮಣೆ ಹಾಕಿದ್ದು, ಈ ಮೂಲಕ ಸ್ವತಃ ಸಿದ್ದರಾಮಯ್ಯ ಪರೋಕ್ಷವಾಗಿ ಚುನಾವಣಾ ಅಖಾಢಕ್ಕಿಳಿದಿದ್ದಾರೆ.
ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಗುರುವಾರ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮೈಮುಲ್ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಅವರಿಗೆ ಮಣೆ ಹಾಕಲಾಗಿದೆ. ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಸದಸ್ಯ ಕೆ.ಮರೀಗೌಡ, ಜಿಪಂ ಮಾಜಿ ಸದಸ್ಯರಾದ ರಾಕೇಶ್ ಪಾಪಣ್ಣ, ಅರುಣ್ ಕುಮಾರ್, ಮುಖಂಡರಾದ ಲೇಖಾ ವೆಂಕಟೇಶ್, ಕೂರ್ಗಳ್ಳಿ ಮಹದೇವ್, ಕೃಷ್ಣಕುಮಾರ್ ಸಾಗರ್, ಬೆಳ್ಳುಳ್ಳಿ ಬಸವರಾಜ್, ಮೆಲ್ಲಳ್ಳಿ ಮಹದೇವಸ್ವಾಮಿ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದರು.
ಆದರೆ, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ಸಮರ ಸಾರಿ ಆ ಪಕ್ಷ ತೊರೆದು ಈಚೆಗೆ ಕಾಂಗ್ರೆಸ್ ಸೇರಿರುವ ಮಾವಿನಹಳ್ಳಿ ಸಿದ್ದೇಗೌಡ ಅವರಿಗೆ ಪಕ್ಷ ಅವಕಾಶ ನೀಡಿದೆ. ಅವರು ಪಕ್ಷದ ನಿಯಮದಂತೆ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿರಲಿಲ್ಲ. ಅವರು ಪಕ್ಷಕ್ಕೆ ಸೇರ್ಪಡೆಯಾಗುವ ವೇಳೆಗಾಗಲೇ ಅರ್ಜಿ ಸ್ವೀಕರಿಸುವ ಸಮಯವೇ ಮುಗಿದು ಹೋಗಿತ್ತು. ಆದರೆ, ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಮಾವೇಶದಲ್ಲಿ ಮಾತನಾಡಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಈಗಾಗಲೇ ಅರ್ಜಿ ಸಲ್ಲಿಸಿರುವವರೊಂದಿಗೆ ಈಚೆಗೆ ಪಕ್ಷಕ್ಕೆ ಸೇರಿದವರೂ ಟಿಕೆಟ್ ಆಕಾಂಕ್ಷಿಗಳು ಇರಬಹುದು ಎಂದು ಹೇಳಿಕೆ ನೀಡಿ ಅಂದು ಟಿಕೇಟ್ ಸುಳಿವು ನೀಡಿದ್ದರು.
ಈ ಹಿನ್ನೆಲೆಯಲ್ಲಿ ?ಸಿದ್ದರಾಮಯ್ಯ ಅವರು ನನಗೇ ಬಿ ಫಾರಂ ಕೊಡುವುದಾಗಿ ತಿಳಿಸಿದ್ದಾರೆ? ಎಂದು ಈಚೆಗೆ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಸಿದ್ದೇಗೌಡ ಹೇಳಿಕೊಂಡಿದ್ದರು. ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿರುವುದರಿಂದಾಗಿ, ಜೆಡಿಎಸ್ನ ಜಿ.ಟಿ.ದೇವೇಗೌಡ ಅವರನ್ನು ಎದುರಿಸಲು ಒಕ್ಕಲಿಗ ಸಮಾಜದ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ಪಕ್ಷದ ಲೆಕ್ಕಾಚಾರ ಸಿದ್ದೇಗೌಡ ಅವರಿಗೆ ನೆರವಾಗಿದೆ.
ಅಭಿನಂದನೆ ಸಲ್ಲಿಸುವೆ: ಇನ್ನೂ ಟಿಕೇಟ್ ದೊರೆತ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ಮಹದೇವಪ್ಪ, ಎಂ.ಬಿ.ಪಾಟೀಲ್, ಸತೀಶ್ಜಾರಕಿಹೊಳಿ ಸೇರಿ ಅನೇಕ ನಾಯಕರು ನನಗೆ ಇಂತಹದೊಂದು ಅವಕಾಶ ನೀಡಿರುವುದಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಈಗಾಗಲೇ ಕಾಂಗ್ರೆಸ್ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ್ಗಳನ್ನು ಕ್ಷೇತ್ರದಲ್ಲಿ ವಿತರಿಸಿದ್ದೇವೆ. ಬಿಜೆಪಿ ಹಾಗೂ ಕೋವಿಡ್ನಲ್ಲಿ ಸ್ಪಂದಿಸದ ಸ್ಥಳೀಯ ಶಾಸಕರ ಧೋರಣೆಗೆ ಜನ ಬೇಸತ್ತಿದ್ದು, ಕಾಂಗ್ರೆಸ್ ಗೆಲ್ಲಿಸುವ ಬಯಕೆ ಮಾಡಿದ್ದಾರೆ. ಹೀಗಾಗಿ ನಾಳೆಯಿಂದಲೇ ಕ್ಷೇತ್ರ ನಾಯಕರ ಸಭೆ ಕರೆದು ಪ್ರಚಾರ ಮತ್ತಷ್ಟು ಹೆಚ್ಚಿಸುವೆ ಎಂದರು.
ಜನಸೇವೆಗೆ ಕಣಕ್ಕಿಳಿದಿದ್ದೇನೆ: ಮಾವಿನಹಳ್ಳಿಸಿದ್ದೇಗೌಡ
ಸಿದ್ದೇಗೌಡ ಮಾತನಾಡಿ, ಜಯಪುರ ಹೋಬಳಿಯ ಮಾವಿನಹಳ್ಳಿ ಗ್ರಾಮದ ರೈತಾಪಿ ಕುಟುಂಬದವರಾಗಿದ್ದಾರೆ. ಲೀಟರ್ ಹಾಲಿನ ದರ 3.80ರೂ. ಇದ್ದಾಗಲೇ ಸೈಕಲ್ನಲ್ಲಿ ಹಾಲು ಹಾಕುತ್ತಿದ್ದೇನು. ಹೊಲ ಊತ್ತು, ಬೆಳೆ ಭಿತ್ತಿ ಎಂಪಿಎಂಸಿ ಮೂಲಕ ಮಾರಾಟ ಮಾಡಿದ್ದೇನೆ. 1983ರಲ್ಲಿ ರಾಜಕೀಯಕ್ಕೆ ಸಿದ್ದರಾಮಯ್ಯರೊಟ್ಟಿಗೆ ರಾಜಕೀಯ ಪ್ರವೇಶ ಮಾಡಿದ್ದು, 1993-94ರಲ್ಲಿ ಮಾವಿನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಆಗಿದ್ದಾರೆ. ಅಂದೇ ಪಂಚಾಯಿತಿ ಅಧ್ಯಕ್ಷರಾಗಿ ಗುಡಿಸಲಲ್ಲಿ ವಾಸಿಸುತ್ತಿದ್ದವರು ಹಾಗೂ ಮನೆ ಇಲ್ಲದವರನ್ನು ನೋಡಿ 800 ಗುಂಪು ಮನೆಗಳನ್ನು ನಿರ್ಮಿಸಿರುವುದು. ಅಂದೆ ಪಂಚಾಯಿತಿಯಲ್ಲಿ ನೆಲೆ ಇಲ್ಲದವರಿಗೆ ಸೈಟು ಹಂಚಿಕೆಯೂ ಸೇರಿ ಏಳು ಗ್ರಾಮಗಳಿಗೂ ಮೂಲಭೂತ ಸೌಕರ್ಯ ಒದಗಿಸುವ ಪ್ರಯತ್ನ ಮಾಡಿದ್ದರು. ಖಾತೆ, ಕಂದಾಯ ಇನ್ನಿತರ ಕೆಲಸಗಳನ್ನು ಸ್ಥಳಕ್ಕೆ ಹೋಗಿ ಮಾಡಿದ್ದರಿಂದಲೇ ಬರೋಬ್ಬರಿ ನಾಲ್ಕು ಬಾರಿ ಗ್ರಾಪಂ ಪ್ರತಿನಿಧಿಸಿದ್ದರು.
ಇದರೊಟ್ಟಿಗೆ ಮಾವಿನಹಳ್ಳಿಯಲ್ಲಿ ಮುಚ್ಚಿ ಹೋಗಿದ್ದ ಕೃಷಿ ದೊಡ್ಡಪ್ಪತ್ತಿನ ಸಹಕಾರ ಸಂಘವನ್ನು 30ಲಕ್ಷಕ್ಕೂ ಹೆಚ್ಚಿನ ಹಣ ವಿನಿಯೋಗಿಸಿ ಉಳಿಸಿ ಅಧ್ಯಕ್ಷರಾಗಿದ್ದು, ಬಳಿಕ ಎಪಿಎಂಸಿ ಅಧ್ಯಕ್ಷರಾಗಿ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಹಲವು ಡೇರಿಗಳ ಕಟ್ಟಡಕ್ಕೆ ಅನುಮೋದನೆ ನೀಡಿದ್ದೇನೆ. 1ವರ್ಷಕ್ಕೆ ಸೀಮಿತವಾಗಿದ್ದ ಹಸು ವಿಮಾ ಯೋಜನೆ 3ವರ್ಷಕ್ಕೆ ಏರಿಕೆ ಮಾಡಿದ್ದು, ಹಾಲು ಒಕ್ಕೂಟದಿಂದಲೇ ಮೇವು ಉಚಿತವಾಗಿ ಒದಗಿಸುವ ಕೆಲಸ ಮಾಡಿಕೊಟ್ಟಿದ್ದೇವೆ. 60 ಕೋಟಿ ಲಾಭ ತಂದಾಯಕವಾಗಿಸುವಲ್ಲಿ ನನ್ನ ಶ್ರಮವಿದೆ. ಸಮ್ಮಿಶ್ರ ಸರ್ಕಾರದ ಅವಧಿಯ ಸಾಲಮನ್ನಾದಲ್ಲಿ 1.5ಕೋಟಿ ಸಾಲಮನ್ನಾ ಹಣವನ್ನು ರೈತರಿಗೆ ಹಿಂದುರುಗುವಂತೆ ಮಾಡಿದ್ದೇವೆ. ಮುಂದೆಯೂ ಜನರೊಟ್ಟಿಗೆ ಇದ್ದು, ಜನಸೇವೆ ಮಾಡುವ ಉದ್ದೇಶದಿಂದಲೇ ಕಣಕ್ಕಿಳಿದಿದ್ದೇನೆಂದರು.