ಮೈಸೂರು:- ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಆದ ಬಳಿಕ ತವರು ಜಿಲ್ಲೆ ಮೈಸೂರಿಗೆ ಪ್ರಥಮ ಬಾರಿಗೆ ಜೂನ್ 10ರಂದು ಆಗಮಿಸಲಿದ್ದು, ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಜಿಲ್ಲಾ ಕಾಂಗ್ರೆಸ್ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
ಸಿದ್ದರಾಮಯ್ಯ ಅವರು ಶನಿವಾರು ಬೆಳಗ್ಗೆ 10:30ಕ್ಕೆ ಸುತ್ತೂರು ಹೆಲಿಪ್ಯಾಡ್ಗೆ ಆಗಮಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ವರುಣ ವಿಧಾನಸಭಾ ಕ್ಷೇತ್ರದ ಬಿಳಿಗೆರೆ ಬೋರೆಯಲ್ಲಿ ಆಯೋಜಿಸಿರುವ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಶ್ರೀ ಕ್ಷೇತ್ರ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸುತ್ತೂರು ಹೆಲಿಪ್ಯಾಡ್ನಿಂದ ವಾಪಸ್ ಬೆಂಗಳೂರಿಗೆ ತೆರಳಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಬಿ.ಜೆ.ವಿಜಯ್ ಕುಮಾರ್ ಮಾತನಾಡಿ, ಜೂನ್ 10ರಂದು ಆಗಮಿಸುತ್ತಿರುವ ಸಿದ್ದರಾಮಯ್ಯ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ನಿರ್ಧರಿಸಲಾಗಿದ್ದು, ಈ ವೇಳೆ ಐವತ್ತು ಸಾವಿರ ಮಂದಿ ಸೇರಲಿದ್ದಾರೆ. ಹಾಗೆಯೆ ಸಿದ್ದರಾಮಯ್ಯ ಅವರನ್ನು ಅರ್ಧ ಕಿಲೋ ಮೀಟರ್ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಗುತ್ತದೆ ಎಂದರು
ಹಾಗೆಯೆ ಬ್ಲಾಕ್ ಅಧ್ಯಕ್ಷರು, ಪಕ್ಷದ ಹಿರಿಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆದುಕೊಂಡು ಬರಬೇಕು. ಅಲ್ಲದೆ ಕಲಾತಂಡಗಳ ವ್ಯವಸ್ಥೆಯನ್ನೂ ಮಾಡಬೇಕು. ತವರಿನಲ್ಲಿ ಸಿದ್ದರಾಮಯ್ಯ ಅವರಿಗೆ ಅದ್ಧೂರಿ ಸ್ವಾಗತ ದೊರೆಯಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಮಾತನಾಡಿ, ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗುವ ಮೂಲಕ ಹೊಸಯುಗ ಪ್ರಾರಂಭ ಆಗಿದೆ. ನಾವೆಲ್ಲರೂ ಸಹಕಾರ ಕೊಟ್ಟರೆ ಉತ್ತಮವಾಗಿ ಆಡಳಿತ ನೀಡಲು ಸಾಧ್ಯವಾಗುತ್ತದೆ. 2024ರ ಪಾರ್ಲಿಮೆಂಟ್ ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯೋನ್ಮುಖರಾಗಬೇಕಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಬನ್ನೂರು ಕೃಷ್ಣಪ್ಪ ಮಾತನಾಡಿ, ಸಿದ್ದರಾಮಯ್ಯ ಅವರು 2ನೇ ಬಾರಿ ಮುಖ್ಯಮಂತ್ರಿ ಆಗಿರುವುದು ಹೆಮ್ಮೆಯ ವಿಚಾರವಾಗಿದೆ. ಅವರನ್ನು ಆತ್ಮೀಯವಾಗಿ ಸ್ವಾಗತಿಸುವುದು ಆದ್ಯ ಕರ್ತವ್ಯ. ಅಲ್ಲದೇ, ಪಕ್ಷವನ್ನು ಅಧಿಕಾರಕ್ಕೆ ತರಲು ಕಷ್ಟಪಟ್ಟವರಿಗೆ ಅವಕಾಶ ಸಿಗಬೇಕು ಎಂದು ಆಶಿಸಿದರು.
ಈ ವೇಖೆ ನಗರಾಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ಕಾರ್ಯದರ್ಶಿ ಚಂದ್ರವೌಳಿ, ಪ್ರೊ.ರಾಮಪ್ಪ , ಮಹಿಳಾ ಆಯೋಗ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೂರ್ಗಳ್ಳಿ ಮಹದೇವ್, ಮಾಜಿ ಮೇಯರ್ ಚಿಕ್ಕಣ್ಣ, ಮುಖಂಡರಾದ ಶಿವನಾಗಪ್ಪ, ಪ್ರೊ.ಶಿವಪ್ರಸಾದ್, ಸೇವಾದಳ ಮುಖಂಡ ಗಿರೀಶ್, ಕಾಂಗ್ರೆಸ್ ಮುಖಂಡ ಸುಂದರ, ಹರ್ಷ, ಈಶ್ವರ ಚಕ್ಕಡಿ, ಡಿ.ನಾಗಭೂಷಣ್, ಜವರೇಗೌಡ, ಎನ್.ಆರ್.ಕ್ಷೇತ್ರದ ಬ್ಲಾಕ್ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.