ಮೈಸೂರು: ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ಮೊದಲ ಬಲಿಯಾಗಿದೆ. ಆರೋಗ್ಯಾಧಿಕಾರಿ ನಾಗೇಂದ್ರ (32) ನಿಧನರಗಿದ್ದಾರೆ.
ನಾಗೇಂದ್ರ ಅವರು ಹುಣಸೂರು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೈಸೂರು ಜಿಲ್ಲೆಯಲ್ಲಿ ಒಟ್ಟು 162 ಆಕ್ಟೀವ್ ಪ್ರಕರಣಗಳಿವೆ. ಇತ್ತ ಹಾಸನ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗಿ ಮಕ್ಕಳನ್ನೇ ಹೆಚ್ಚಾಗಿ ಕಾಡುತ್ತಿದೆ. ಒಂದೇ ವಾರದಲ್ಲಿ ಮೂವರು ಬಾಲಕಿಯರು ಮೃತಪಟ್ಟಿದ್ದಾರೆ.
ಇನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲೂ ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಹಿಮ್ಸ್ ನಲ್ಲಿ 48 ಮಕ್ಕಳು ಹಾಗೂ 22 ವಯಸ್ಕರು ಚಿಕಿತ್ಸೆಗೆ ದಾಖಲಾಗಿದ್ದಾರೆ. 48 ಮಕ್ಕಳ ಪೈಕಿ 11 ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಜನವರಿಯಿಂದ ಈವರೆಗೆ ಡೆಂಗ್ಯೂ ಶಂಕಿತ 628 ವಯಸ್ಕರು ಹಾಗೂ 602 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಳರೋಗಿಯಾಗಿ ದಾಖಲಿಸಿ ಹಿಮ್ಸ್ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೆ ಇದೆ. ಈವರೆಗೆ ಒಟ್ಟು ನಾಲ್ವರು ಮಹಾಮಾರಿ ಡೆಂಗ್ಯೂಗೆ ಬಲಿಯಾಗಿದ್ದಾರೆ. ಅದರಲ್ಲಿ ಎರಡು ಸಾವುಗಳನ್ನು ರಾಜ್ಯ ಡೆಂಗ್ಯೂ ಡೆತ್ ಆಡಿಟ್ ಸಮಿತಿ ದೃಢಪಡಿಸಿದೆ.
ಇದುವರೆಗೆ ಜಿಲ್ಲೆಯಲ್ಲಿ 6400 ಜನರಿಗೆ ಡೆಂಗ್ಯೂ ಪರೀಕ್ಷೆ ನಡೆಸಲಾಗಿದೆ. ಡೆಂಗ್ಯೂ ನಿಯಂತ್ರಕ್ಕೆ ಹಲವು ಕ್ರಮ ಕೈಗೊಂಡ ಬಗ್ಗೆ ಹಿಮ್ಸ್ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.