ಹೈದರಾಬಾದ್: ಕೊನೆಗೆ ಬೌಲರ್ಗಳು ನೀಡಿದ ಅತ್ಯುತ್ತಮ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೈದರಾಬಾದ್ ಸನ್ ರೈಸರ್ಸ್ ವಿರುದ್ಧ 7 ರನ್ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 144 ರನ್ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ್ದ ಹೈದರಾಬಾದ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಹೊಡೆದು ಸೋಲೊಪ್ಪಿಕೊಂಡಿತು. ಐಪಿಎಲ್ ಅಂಕಪಟ್ಟಿಯಲ್ಲಿ 7 ಪಂದ್ಯ ಆಡಿ 2 ರಲ್ಲಿ ಜಯಗಳಿಸಿರುವ ಡೆಲ್ಲಿ 4 ಅಂಕ ಪಡೆದು 10ನೇ ಸ್ಥಾನದಲ್ಲೇ ಮುಂದುವರೆದರೆ ಹೈದರಾಬಾದ್ 2 ಜಯ ಸಾಧಿಸಿ 4 ಅಂಕ ಪಡೆದು 9ನೇ ಸ್ಥಾನದಲ್ಲಿ ಮುಂದುವರೆದಿದೆ.
ಕೊನೆಯ 30 ಎಸೆತಗಳಲ್ಲಿ ಹೈದರಾಬಾದ್ ತಂಡಕ್ಕೆ 51 ರನ್ಗಳ ಅಗತ್ಯವಿತ್ತು. 17ನೇ ಓವರ್ನಲ್ಲಿ 13 ರನ್ ಬಂದರೆ 18ನೇ ಓವರ್ನಲ್ಲಿ 15 ರನ್ ಬಂದಿತ್ತು. 19ನೇ ಓವರ್ನಲ್ಲಿ10 ರನ್ ಬಂದರೂ ಹೆನ್ರಿಕ್ ಕ್ಲಾಸೆನ್ ಔಟಾದ ಪರಿಣಾಮ ಪಂದ್ಯ ರೋಚಕ ಘಟ್ಟಕ್ಕೆ ತಿರುಗಿತು.
ಕೊನೆಯ ಓವರ್ನಲ್ಲಿ 13 ರನ್ಗಳ ಅಗತ್ಯವಿತ್ತು. ಮುಕೇಶ್ ಕುಮಾರ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ಕೇವಲ 5 ರನ್ ಬಿಟ್ಟುಕೊಡುವ ಮೂಲಕ ಡೆಲ್ಲಿ ತಂಡಕ್ಕೆ ಜಯವನ್ನು ತಂದುಕೊಟ್ಟರು.
ಹೈದರಾಬಾದ್ ಪರ ಮಯಾಂಕ್ ಅಗರ್ವಾಲ್ 49 ರನ್ (39 ಎಸೆತ, 7 ಬೌಂಡರಿ), ಹೆನ್ರಿಕ್ ಕ್ಲಾಸೆನ್ 31 ರನ್ (19 ಎಸೆತ, 3 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದರು. ವಾಷಿಂಗ್ಟನ್ ಸುಂದರ್ ಔಟಾಗದೇ 24 ರನ್(15 ಎಸೆತ, 3 ಬೌಂಡರಿ) ಹೊಡೆದರು.
ಅಕ್ಷರ್ ಪಟೇಲ್ ಮತ್ತು ಅನ್ರಿಚ್ ನೋರ್ಕಿಯ ತಲಾ 2 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ, ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕ ಡೇವಿಡ್ ವಾರ್ನರ್ 21 ರನ್, ಮಿಷೆಲ್ ಮಾರ್ಷ್ 25 ರನ್(15 ಎಸೆತ, 5 ಬೌಂಡರಿ), ಮನೀಷ್ ಪಾಂಡ 34 ರನ್(27 ಎಸೆತ), ಅಕ್ಷರ್ ಪಟೇಲ್ 34 ರನ್ (34 ಎಸೆತ, 4 ಬೌಂಡರಿ) ಹೊಡೆದು ಔಟಾದರು.
ಡೆಲ್ಲಿಗೆ 7 ರನ್ಗಳ ರೋಚಕ ಜಯ
