ಮಂಡ್ಯ: ತಮಿಳುನಾಡಿಗೆ ಕೆಆರ್ ಎಸ್ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಗುರುವಾರ ನಗರದ ಸರ್.ಎಂ.ವಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಕಷ್ಟ ಪರಿಸ್ಥಿತಿಯಲ್ಲಿ ನೀರು ಹರಿಸುವ ಮೂಲಕ ರಾಜ್ಯ ಸರ್ಕಾರ ರೈತರ ಹಿತ ಕಡೆಗಣಿಸಿದೆ. ಕಾವೇರಿ ನೀರು ನಿರ್ವಹಣಾ ಸಮಿತಿ ಹಾಗೂ ಪ್ರಾಧಿಕಾರ ಕೂಡ ರಾಜ್ಯಕ್ಕೆ ಅನ್ಯಾಯ ಮಾಡಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯುಸೆಕ್ ನೀರು ಬಿಡಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದ ಬೆನ್ನಲ್ಲೇ ಕಾವೇರಿ ನೀರಾವರಿ ನಿಗಮ ಮಂಗಳವಾರ ರಾತ್ರಿಯಿಂದಲೇ ನದಿಗೆ ನೀರು ಹರಿಸುತ್ತಿದೆ. ಬುಧವಾರ ನದಿಗೆ 7,279 ಕ್ಯುಸೆಕ್ ನೀರು ಬಿಟ್ಟಿದ್ದು ತಮಿಳುನಾಡಿಗೆ ಹರಿದು ಹೋಗುತ್ತಿದೆ.
ಮಂಗಳವಾರ ರಾತ್ರಿ 8 ಗಂಟೆಯವರೆಗೂ 2,292 ಕ್ಯುಸೆಕ್ ನೀರು ನದಿಗೆ ಹರಿಯುತ್ತಿತ್ತು, ಬುಧವಾರ ಬೆಳಿಗ್ಗೆ 6 ಗಂಟೆ ವೇಳೆಗೆ 4,398 ಕ್ಯುಸೆಕ್ಗೆ ಏರಿಕೆಯಾಗಿತ್ತು, ರಾತ್ರಿ 8 ಗಂಟೆ ವೇಳೆಗೆ 7,279 ಕ್ಯುಸೆಕ್ಗೆ ಏರಿಸಲಾಗಿದೆ. ಜಲಾಶಯಕ್ಕೆ 2,357 ಕ್ಯುಸೆಕ್ ಒಳಹರಿವು, 7329 ಹೊರಹರಿವು ದಾಖಲಾಗಿದೆ.
ಈ ಕುರಿತು ಮಾಹಿತಿ ನೀಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರಾಕರಿಸಿದರು.
ಜಿಲ್ಲೆಯಾದ್ಯಂತ ಹೋರಾಟ: ಬರ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ಜಿಲ್ಲೆಯಾದ್ಯಂತ ವಿವಿಧ ಸಂಘಟನೆಗಳು ಹೋರಾಟಕ್ಕೆ ಕರೆ ನೀಡಿವೆ. ಬುಧವಾರ ಮಂಡ್ಯ ಯೂತ್ ಗ್ರೂಪ್ ಸದಸ್ಯರು ಕಣ್ಣಿಗೆ ಕಪುö್ಪ ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು. `ಸಂಕಷ್ಟ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಬಾರದು’ ಎಂದು ಒತ್ತಾಯಿಸಿದರು. ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಹೋರಾಟದ ನೇತೃತ್ವ ವಹಿಸಿದ್ದರು. ಶ್ರೀರಂಗಪಟ್ಟಣದಲ್ಲಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಪಂಜಿನ ಮೆರವಣಿಗೆ ನಡೆಸಿದರು.
ಜೆಡಿಎಸ್ ನಾಯಕರ ಗಡುವು: ಜೆಡಿಎಸ್ ನಾಯಕರು ಪತ್ರಿಕಾಗೋಷ್ಠಿ ನಡೆಸಿ, ಸೆ.1ರ ಒಳಗೆ ನೀರು ನಿಲ್ಲಿಸದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಮುಖಂಡ ಸುರೇಶ್ಗೌಡ ಮಾತನಾಡಿ, `ರಾತ್ರಿ 10 ಸಾವಿರ ಕ್ಯುಸೆಕ್, ಬೆಳಿಗ್ಗೆ 5 ಸಾವಿರ ಕ್ಯುಸೆಕ್ ಹರಿಸಲಾಗಿದೆ. ರಾಜ್ಯ ಸರ್ಕಾರ ತಮಿಳುನಾಡು ರಾಜ್ಯವನ್ನು ಓಲೈಸುತ್ತಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ಶಾಸಕರು ರಾಜೀನಾಮೆ ನೀಡಿ ಹೋರಾಟಕ್ಕೆ ಬರಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೇರಿದಂತೆ ವಿವಿಧ ರೈತ ಸಂಘಟನೆಗಳ ಸದಸ್ಯರು ಗುರುವಾರ ಹೋರಾಟಕ್ಕೆ ಕರೆ ನೀಡಿದ್ದಾರೆ.