ಮಂಡ್ಯ: ಕಳೆದ ಹಲವು ದಿನಗಳಿಂದ ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರನ್ನು ನಿರಂತರವಾಗಿ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು ಪರಿಣಾಮ ಇದೀಗ ಕೆಆರ್ಎಸ್ ಡ್ಯಾಂನ ನೀರಿನ ಮಟ್ಟ 105 ಅಡಿಗೆ ಕುಸಿತಗೊಂಡಿದೆ.
ಕೆಆರ್ಎಸ್ ಡ್ಯಾಂನಲ್ಲಿ ನೀರಿನ ಪ್ರಮಾಣ ಕುಸಿಯುತ್ತಿರುವುದರಿಂದ ಕಾವೇರಿ ಕೊಳ್ಳದ ರೈತರಲ್ಲಿ ಕಾವೇರಿ ಒಡಲು ಬರಿದಾಗುವ ಆತಂಕ ಎದುರಾಗಿದ್ದು ರಾಜ್ಯ ಸರ್ಕಾರ ಅನ್ನದಾತರ ಮಾತಿಗೂ ಬೆಲೆ ಕೊಡದ ಹಿನ್ನೆಲೆ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ಹಲವೆಡೆ ಪ್ರತಿಭಟನೆ ಮುಂದುವರಿದಿದೆ.
ಆದರೂ ಇಂದು ಕೂಡಾ ತಮಿಳುನಾಡಿಗೆ 12,631 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು ಡ್ಯಾಂನಿಂದ ಒಟ್ಟಾರೆ 15,247 ಕ್ಯೂಸೆಕ್ ಹೊರಹರಿವಿದೆ. ಕೆಆರ್ಎಸ್ ಡ್ಯಾಂಗೆ ಕೇವಲ 4,983 ಕ್ಯೂಸೆಕ್ ನೀರು ಮಾತ್ರವೇ ಹರಿದು ಬರುತ್ತಿದ್ದು ಡ್ಯಾಂನಲ್ಲಿ ನೀರು ಸಂಗ್ರಹಣೆಗೆ ಗರಿಷ್ಠ ಮಟ್ಟ 124.80 ಅಡಿ ಇದೆ. ಸದ್ಯ 105.70 ಅಡಿ ನೀರು ಸಂಗ್ರಹ ಇದೆ. 47.542 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಕೇವಲ 27.617 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿದೆ ಎಂದು ತಿಳಿದುಬಂದಿದೆ.