ಮದ್ದೂರು:- ಮಳೆ ಬರುವ ಸಂದರ್ಭದಲ್ಲಿ ಹೆಲ್ಮೆಟ್ ಹಾಕಿಕೊಂಡು ಮರದ ಕೆಳಕ್ಕೆ ನಿಂತಿದ್ದ ವ್ಯಕ್ತಿಗೆ ಸಿಡಿಲು ಬಡಿದು ಆತ ಸ್ಥಳದಲ್ಲೇ ಸಾವಿಗೀಡಾರುವ ಘಟನೆ ಮದ್ದೂರು ತಾಲ್ಲೂಕಿನ ಮಾದರಹಳ್ಳಿ ಸಮೀಪದ ಹರಳಹಳ್ಳಿ ಸರ್ಕಲ್ ಬಳಿ ಗುರುವಾರ ಸಂಜೆ ಸುಮಾರು 4.30 ಗಂಟೆಯ ಸಂದರ್ಭದಲ್ಲಿ ನಡೆದಿದೆ.
ತಾಲ್ಲೂಕಿನ ವೈದ್ಯನಾಥಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮಧು (35) ಸಿಡಿಲಿಗೆ ಬಲಿಯಾದ ವ್ಯಕ್ತಿ.
ಈತ ತನ್ನ ಪತ್ನಿಯನ್ನು ಮಳವಳ್ಳಿ ತಾಲ್ಲೂಕಿನ ಕಾಡುಕೊತ್ತನಹಳ್ಳಿ ಗ್ರಾಮಕ್ಕೆ ಬಿಟ್ಟು ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಜೋರಾದ ಮಳೆ ಪ್ರಾರಂಭವಾಗಿದ್ದರಿಂದ ಬೈಕನ್ನು ಒಂದು ಕಡೆ ನಿಲ್ಲಿಸಿ, ಹೆಲ್ಮೆಟ್ ಹಾಕಿಕೊಂಡೇ ಮರದ ನೆರಳಿನಲ್ಲಿ ಆಸರೆ ಪಡೆದಿದ್ದರು. ಇದೇ ಸಂದರ್ಭದಲ್ಲಿ ಮೊಬೈಲ್ ನಲ್ಲಿ ಯಾರೊಂದಿಗೆ ಮಾತನಾಡುತ್ತಿದ್ದರು ಎನ್ನಲಾಗಿದ್ದು, ಆಗ ಸಿಡಿಲು ಬಡಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸಿಡಿಲು ಬಡಿದ ರಭಸಕ್ಕೆ ಆತನಿಗೆ ಹೃದಯಾಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸಿಡಿಲ ರಭಸಕ್ಕೆ ಮೊಬೈಲ್ ಕೂಡ ಚಿಂದಿ ಚಿಂದಿಯಾಗಿದೆ.
ಸಾವಿಗೀಡಾದ ವ್ಯಕ್ತಿ 2 ವರ್ಷಗಳ ಹಿಂದೆ ಮದುವೆಯಾಗಿದ್ದು ಆತನಿಗೆ 9 ತಿಂಗಳ ಒಂದು ಹೆಣ್ಣು ಮಗುವಿತ್ತು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಕೆ.ಎಂ.ದೊಡ್ಡಿ ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.