ಚೆನ್ನೈ: ಗಾಯಕ್ವಾಡ್ ಅವರ ಸ್ಫೋಟಕ ಅರ್ಧಶತಕ ಮತ್ತು ಮೋಯಿನ್ ಅಲಿಯ ಮಾರಕ ಬೌಲಿಂಗ್ ನೆರವಿನಿಂದ ಲಕ್ನೋ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 12 ರನ್ಗಳ ರೋಚಕ ಜಯ ಸಾಧಿಸಿ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಂ.ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಭರ್ಜರಿ 217 ರನ್ ಸಿಡಿಸಿತ್ತು. 218 ರನ್ಗಳ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್ ರಾಹುಲ್ ಹಾಗೂ ಕೇಲ್ ಮೇಯರ್ಸ್ ಕೌಟರ್ ಅಟ್ಯಾಕ್ ಮಾಡಿದರು. ಆರಂಭದಲ್ಲೆ ಎದುರಾಳಿ ಬೌಲರ್ಗಳನ್ನ ಚೆಂಡಾಡುತ್ತಾ ಸಿಕ್ಸರ್, ಬೌಂಡರಿ ಅಬ್ಬರಿಸಿದರು. ಪವರ್ ಪ್ಲೇ ವೇಳೆಗೆ ಸಿಎಸ್ಕೆ 79 ರನ್ ಗಳಿಸಿದರೆ, ಲಕ್ನೋ 80 ರನ್ ಗಳಿಸಿತ್ತು. ಇದರಿಂದ ತಂಡದಲ್ಲಿ ನಿರಾಯಾಸವಾಗಿ ಗೆಲ್ಲುವ ಕನಸು ಚಿಗುರಿತ್ತು. ಅಷ್ಟರಲ್ಲೇ ಮೇಯರ್ಸ್ ಔಟಾಗಿ ತಂಡಕ್ಕೆ ಆಘಾತ ನೀಡಿದರು. 22 ಎಸೆತಗಳಲ್ಲಿ ಸ್ಫೋಟಕ 53 (8 ಬೌಂಡರಿ, 2 ಸಿಕ್ಸರ್) ಚಚ್ಚಿ ಔಟಾದರು. ಈ ಬೆನ್ನಲ್ಲೇ ದೀಪಕ್ ಹೂಡಾ (2 ರನ್), ಕೆ.ಎಲ್.ರಾಹುಲ್ 18 ಎಸೆತಗಳಲ್ಲಿ 20 ರನ್, ಮಾರ್ಕಸ್ ಸ್ಟೋಯ್ನಿಸ್ 21 ರನ್ (18 ಎಸೆತ, 1 ಸಿಕ್ಸರ್) ಹಾಗೂ ಕೃನಾಲ್ ಪಾಂಡ್ಯ ಕೇವಲ 9 ರನ್ ಗಳಿಸಿ ಪೆವಿಲಿಯನ್ನತ್ತ ಮುಖ ಮಾಡಿದರು.
ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಅಬ್ಬರಿಸಿದ ನಿಕೋಲಸ್ ಪೂರನ್ 18 ಎಸೆಗಳಲ್ಲಿ 2 ಬೌಂಡರಿ, 3 ಭರ್ಜರಿ ಸಿಕ್ಸರ್ನೊಂದಿಗೆ 32 ರನ್ ಚಚ್ಚಿದರು. ಇದರಿಂದ ತಂಡದಲ್ಲಿ ಮತ್ತೆ ಗೆಲುವಿನ ಭರವಸೆ ಮೂಡುತ್ತಿದ್ದಂತೆ ಕ್ಯಾಚ್ ನೀಡಿ ಭರವಸೆ ಕೈಚೆಲ್ಲಿದರು. ಆಯುಷ್ ಬದೋನಿ 18 ಎಸೆತಗಳಲ್ಲಿ 23 ರನ್ ಗಳಿಸಿದರೆ, ಕೃಷ್ಣಪ್ಪ ಗೌತಮ್ 17 ರನ್ ಗಳಿಸಿದರೆ, ಮಾರ್ಕ್ ವುಡ್ 3 ಎಸೆತಗಳಲ್ಲಿ 10 ರನ್ ಗಳಿಸಿ ಕ್ರೀಸ್ನಲ್ಲಿ ಉಳಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ಕೆ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಬೃಹತ್ ಮೊತ್ತ ಕಲೆಹಾಕಿತು. ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ ಮತ್ತು ಡಿವೋನ್ ಕಾನ್ವೆ ಉತ್ತಮ ಆರಂಭ ಒದಗಿಸಿದರು. ಸಿಕ್ಸರ್, ಬೌಂಡರಿಗಳನ್ನು ಸಿಡಿಸುತ್ತಾ ಎದುರಾಳಿ ತಂಡದ ಬೌಲರ್ಗಳನ್ನು ಬೆಂಡೆತ್ತಿದರು. ಮೊದಲ ವಿಕೆಟ್ ಪತನಕ್ಕೆ 9.1 ಓವರ್ಗಳಲ್ಲಿ 110 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ನೆರವಾದರು.
ಈ ವೇಳೆ ಋತುರಾಜ್ ಗಾಯಕ್ವಾಡ್ 31 ಎಸೆತಗಳಲ್ಲಿ ಸ್ಫೋಟಕ 57 ರನ್ (3 ಬೌಂಡರಿ, 4 ಸಿಕ್ಸರ್) ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಡಿವೋನ್ ಕಾನ್ವೆ 29 ಎಸೆತಗಳಲ್ಲಿ 47 ರನ್ (5 ಬೌಂಡರಿ, 2 ಸಿಕ್ಸರ್) ಗಳಿಸಿ ಪೆವಿಲಿಯನ್ ಸೇರಿದರು. ನಂತರ ಬಂದ ಶಿವಂ ದುಬೆ ಸಹ ಸ್ಫೋಟಕ ಬ್ಯಾಟಿಂಗ್ ಲಕ್ನೋ ಬೌಲರ್ಗಳ ಬೆವರಿಳಿಸಿದರು. 16 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ನೊಂದಿಗೆ 27 ರನ್ ಚಚ್ಚಿದ ದುಬೆ, ಹ್ಯಾಟ್ರಿಕ್ ಸಿಕ್ಸರ್ ಸಿಡಿರುವ ಬರದಲ್ಲಿ ಕ್ಯಾಚ್ ನೀಡಿ ಔಟಾದರು. ಕೊನೆಯಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಅಂಬಟಿ ರಾಯುಡು 14 ಎಸೆತಗಳಲ್ಲಿ 2 ಸಿಕ್ಸರ್, 2 ಬೌಂಡರಿಯೊಂದಿಗೆ ಅಜೇಯ 27 ರನ್ ಬಾರಿಸಿದರು. ಇದರೊಂದಿಗೆ ನಾಯಕ ಎಂ.ಎಸ್ ಧೋನಿ ಮೂರೇ ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ನೊಂದಿಗೆ 12 ರನ್ ಚಚ್ಚಿ ಅಭಿಮಾನಿಗಳನ್ನ ರಂಜಿಸಿದರು. ಮೊಯಿನ್ ಅಲಿ 19 ರನ್, ಬೆನ್ ಸ್ಟೋಕ್ಸ್ 8 ರನ್, ರವೀಂದ್ರ ಜಡೇಜಾ 3 ರನ್ ಗಳಿಸಿದರೆ, ಮಿಚೆಲ್ ಸ್ಯಾಂಟ್ನರ್ 1 ರನ್ ಗಳಿಸಿ ಕ್ರೀಸ್ನಲ್ಲಿ ಉಳಿದರು.
ರನ್ ಬಿಟ್ಟುಕೊಡುವ ಜೊತೆಗೆ ಬೌಲಿಂಗ್ನಲ್ಲೂ ಪ್ರಾಬಲ್ಯ ಮೆರೆದ ಲಕ್ನೋ ಸೂಪರ್ ಜೈಂಟ್ಸ್ ತಂಡದ ರವಿ ಬಿಷ್ಣೋಯಿ 4 ಓವರ್ಗಳಲ್ಲಿ 28 ರನ್ ನೀಡಿ 3 ವಿಕೆಟ್ ಪಡೆದರೆ, ಮಾರ್ಕ್ ವುಡ್ 4 ಓವರ್ಗಳಲ್ಲಿ 49 ರನ್ ನೀಡಿ 3 ವಿಕೆಟ್ ಪಡೆದರು. ಅವೇಶ್ ಖಾನ್ 3 ಓವರ್ಗಳಲ್ಲಿ 39 ರನ್ ನೀಡಿ 1 ವಿಕೆಟ್ ಪಡೆದರು.
ರನ್ ಏರಿದ್ದು ಹೇಗೆ?
28 ಎಸೆತ 50 ರನ್
54 ಎಸೆತ 100 ರನ್
81 ಎಸೆತ 150 ರನ್
120 ಎಸೆತ 217 ರನ್