ಬೆಂಗಳೂರು:- ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಭರ್ಜರಿ ಜಯಗಳಿಸಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯ ಸಿದ್ದತೆಯನ್ನ ನಡೆಸಿದ್ದು, ಸಚಿವ ಸಂಪುಟದ ಸದಸ್ಯರಿಗೆ ಈ ಬಾರೀ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 20 ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂದು ಟಾರ್ಗೆಟ್ ನೀಡಿದ್ದಾರೆ.
ಹೈಕಮಾಂಡ್ ನಾಯಕರ ಜೊತೆಗೆ ಲೋಕಸಭಾ ಚುನಾವಣಾ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಚರ್ಚೆ ನಡೆಸಿದ್ದು, ಹಲವು ಸ್ಥಾನಗಳನ್ನ ಗೆಲ್ಲುವ ತಂತ್ರಗಾರಿಕೆಯನ್ನ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಯಾವ ಕ್ಷೇತ್ರದಲ್ಲಿ ಯಾರನ್ನ ಕಣಕ್ಕಿಳಿಸಬೇಕು ಎನ್ನುವ ಚರ್ಚೆ ನಡೆಯುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವಿ ನಾಯಕರು ಸೇರಿದಂತೆ 14 ಸಂಪುಟ ಸಚಿವರು ಸೋತಿದ್ದಾರೆ. ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿಯೂ ಪ್ರಭಾವಿ ನಾಯಕರನ್ನ ಸೋಲಿಸಲು ತಮ್ಮ ಪಕ್ಷದ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿ ಕೆ ಶಿವಕುಮಾರ್ ಅವರಿಗೆ ಬಿಬಿಎಂಪಿ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ರಾಜಧಾನಿ ಬೆಂಗಳೂರ ವ್ಯಾಪ್ತಿಯಲ್ಲಿ 2024 ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ತಂತ್ರಗಾರಿಕೆಯನ್ನ ರೂಪಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಸೆಂಟ್ರಲ್ನಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ಕಾಂಗ್ರೆಸ್ ಚುನಾವಣಾ ತಜ್ಞರ ಸಲಹೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ 32 ವರ್ಷಗಳಿಂದ ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದೇ ಇಲ್ಲ. ಈ ಹಿಂದೆ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಬೆಂಗಳೂರು ದಕ್ಷಿಣ ಕ್ಷೇತ್ರ ಪ್ರತಿನಿಧಿಸುತ್ತಿದ್ದರು. ನಂತರ ಅನಂತಕುಮಾರ್ ನಿಧನದ ಬಳಿಕ ತೇಜಸ್ವಿ ಸೂರ್ಯ ಅವರು ಈ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದರೆ, ಈ ಬಾರಿ ಶತಾಯಗತಾಯ ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಬೇಕು ಎಂದು ಡಿಕೆ ಶಿವಕುಮಾರ್ ಪ್ರಯತ್ತಿಸುತ್ತಿದ್ದಾರೆ.
ಬೆಂಗಳೂರು ದಕ್ಷಿಣದಲ್ಲಿ ಪ್ರತಿನಿಧಿಸಿ ಗೆಲುವು ಸಾಧಿಸಿದ್ದ ತೇಜಸ್ವಿ ಸೂರ್ಯ ಬಿಜೆಪಿ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾಗಿದ್ದಾರೆ. ಈ ಹಿನ್ನೆಲೆ ತೇಜಸ್ವಿ ಸೂರ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಒಂದು ವೇಳೆ ತೇಜಸ್ವಿ ಸೂರ್ಯ ಪರಾಜಿತರಾದ್ರೆ ಬಿಜೆಪಿಗೆ ದೊಡ್ಡ ಹಿನ್ನಡೆ ಆಗಲಿದೆ ಎಂಬುವುದು ಕಾಂಗ್ರೆಸ್ ಲೆಕ್ಕಾಚಾರ ಆಗಿದೆ. ತೇಜಸ್ವಿ ಸೂರ್ಯ ವಿರುದ್ಧ ಬೆಂಗಳೂರು ದಕ್ಷಿಣದಲ್ಲಿ ಡಿ ಕೆ ಶಿವಕುಮಾರ್ ಚಕ್ರವ್ಯೂಹ ರೆಡಿ ಮಾಡುತ್ತಿದ್ದು, ಸಿನಿಮಾ ನಟಿ, ಮಾಜಿ ಸಂಸದೆ ರಮ್ಯಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ.
ರಮ್ಯಾ ಅವರ ಜನಪ್ರಿಯತೆ ಬೆಂಗಳೂರಿನಲ್ಲಿ ವರ್ಕೌಟ್ ಆಗಬಹುದು. ಅಲ್ಲದೇ ರಮ್ಯಾ ಸ್ಪರ್ಧೆಯಿಂದ ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳ ಜೊತೆ ಯುವ ಮತಗಳು ಹಾಗೂ ಒಕ್ಕಲಿಗರ ಮತಗಳು ಕೂಡ ಕಾಂಗ್ರೆಸ್ ಪಾಲಾಗಲಿವೆ ಎಂಬುದು ಕಾಂಗ್ರೆಸ್ ನಾಯಕರ ಪ್ಲಾನ್ ಆಗಿದೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವಿ ನಾಯಕರನ್ನ ಸೋಲಿಸಲು ಕಾಂಗ್ರೆಸ್ ನಡೆಸಿದ ತಂತ್ರಗಾರಿಕೆಯನ್ನ ಲೋಕಸಭಾ ಚುನಾವಣೆಯಲ್ಲೂ ನಡೆಸುವ ಮೂಲಕ ಪ್ರಭಾವಿ ನಾಯಕರನ್ನ ಸೋಲಿಸಲು ಕಾಂಗ್ರೆಸ್ ನಾಯಕರು ಪ್ಲಾನ್ ನಡೆಸಿದ್ದಾರೆ ಎಂದು ಹೇಳಲಾಗಿದೆ.