ಮೈಸೂರು: ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರಿದಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಉಡವೇಪುರ ಗ್ರಾಮದ ಬಳಿ ಹುಲಿ ದಾಳಿಯಿಂದ ರೈತನೋರ್ವ ಬಲಿಯಾಗಿದ್ದಾನೆ . ರೈತ ಗಣೇಶ(55) ಮೃತ ದುರ್ದೈವಿ. ದನ ಮೇಯಿಸುತ್ತಿದ್ದಾಗಲೇ ರೈತ ಗಣೇಶನ ಮೇಲೆ ಹುಲಿ ದಾಳಿ ಮಾಡಿದೆ. ದಾಳಿಯಿಂದಾಗಿ ರೈತ ಸ್ಥಳದಲ್ಲೇ ಮೃತಪಟ್ಟಿದ್ದು ರೈತನ ಮೃತದೇಹವನ್ನು ಅರ್ಧ ತಿಂದು ಹುಲಿ ಬಿಟ್ಟುಹೋಗಿದೆ. ಕೂಡಲೇ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಸ್ಥಳೀಯ ಶಾಸಕ ಜಿ.ಡಿ.ಹರೀಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಗರಹೊಳೆ ಉದ್ಯಾನದ ಮುದ್ದನಹಳ್ಳಿ ಅರಣ್ಯ ಪ್ರದೇಶದ ಬಫರ್ ಜೋನ್ ನಲ್ಲಿ ಜಾನುವಾರು ಮೇಯಿಸಲು ಹೋಗಿದ್ದಾಗ ಹುಲಿ ರೈತನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಮೃತ ರೈತ ಗಣೇಶನಿಗೆ ಪತ್ನಿ, ಮೂವರು ಗಂಡು ಮಕ್ಕಳಿದ್ದಾರೆ. ಗಣೇಶ್ ಉಡುವೆಪುರದ ಪಕ್ಕದಲ್ಲೇ ಇರುವ ಮುದ್ದನಹಳ್ಳಿ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸಲು ಹೋಗಿದ್ದರು. ಸಂಜೆ ಜಾನುವಾರುಗಳು ಮನೆಗೆ ವಾಪಸ್ ಆದರೂ ಗಣೇಶ್ ಬಂದಿರಲಿಲ್ಲ. ಗಾಬರಿಗೊಂಡ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಬಂದ ಅಧಿಕಾರಿಗಳು ಅರಣ್ಯದಲ್ಲಿ ಹುಡುಕಾಟ ನಡೆಸಿದ್ದು ಮುದ್ದನಹಳ್ಳಿ ಅರಣ್ಯದ ಬಫರ್ ಏರಿಯಾದ ಪ್ರದೇಶದ ಕೆರೆ ಬಳಿ ಗಣೇಶ್ರ ಶವ ಪತ್ತೆಯಾಗಿದೆ.
ಇನ್ನು ಸೆಪ್ಟೆಂಬರ್ 21ರಂದು ಇದೇ ಅರಣ್ಯ ವ್ಯಾಪ್ತಿಯಲ್ಲಿ ಮುದ್ದನಹಳ್ಳಿಯ ರಮೇಶ್ ಎಂಬುವವರ ಮೇಲೆ ಹುಲಿ ದಾಳಿ ನಡೆಸಿತ್ತು. ಘಟನೆಯಲ್ಲಿ ತೀವ್ರಗಾಯಗೊಂಡ ರಮೇಶ್ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಾಗರಹೊಳೆ ವನ್ಯಜೀವಿ ವಿಭಾಗದ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಡಂಚಿನಲ್ಲಿ ಗ್ರಾಮದ ಹೊರಾವರಣದಲ್ಲಿ ದನ ಮೇಯಿಸಲು ಹೋಗಿದ್ದಾಗ ಹಸುವಿನ ಮೇಲೆ ಹುಲಿ ದಾಳಿ ಮಾಡಿದ ದೃಶ್ಯ ಕಂಡು ರಕ್ಷಿಸಲು ಹೋದ ರೈತನ ಮೇಲೆ ಹುಲಿ ದಾಳಿ ಮಾಡಿತ್ತು. ರಮೇಶ್ ಜೋರಾಗಿ ಕಿರುಚಾಡಿದಾಗ, ಅಕ್ಕಪಕ್ಕದಲ್ಲಿ ದನ ಮೇಯಿಸುತ್ತಿದ್ದ ದನಗಾಹಿಗಳು ಹೋಗಿ ಹುಲಿ ಓಡಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.