ಬೆನಕ ಬೆನಕ ಏಕದಂತ ಪಚ್ಚೆಕಲ್ಲು ಪಾಣಿಪೀಠ ನುಚ್ಚಿನುಂಡೆ ಹೊನ್ನಘಂಟೆ ಒಪ್ಪುವ ವಿಘ್ನೇಶ್ವರನಿಗೆ ಇಪ್ಪತ್ತೊಂದು ನಮಸ್ಕಾರಗಳು ಎನ್ನುತ್ತಾ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳೋಣ. ವಿನಾಯಕ, ವಿಘ್ನರಾಜ , ಗೌರಿಪುತ್ರ , ಗಣೇಶ್ವರ, ಸ್ಕಂದಗ್ರಜ , ಪೂತ , ದಕ್ಷ , ಅಧ್ಯಕ್ಷ , ದ್ವಿಜಪ್ರಿಯಾ , ಅಗ್ನಿಗರ್ಭಚಿದ , ಇಂದ್ರಶ್ರೀಪ್ರದಾ , ವಾಣಿಪ್ರದಾ , ಅವ್ಯಯ , ಸರ್ವಸಿದ್ಧಿಪ್ರದಾ , ಸರ್ವಜ್ಞನಯ , ಸರ್ವರಿಪ್ರಿಯಾ , ಸರ್ವಾತ್ಮಕ , ಸೃಷ್ಟಿಕರ್ತ , ದೇವ , ಅನೇಕಾರ್ಚಿತ , ಶಿವ , ಶುದ್ಧ , ಬುದ್ಧಿಪ್ರಿಯಾ , ಸಾಂಟಾ , ಬ್ರಹ್ಮಚಾರಿಣ , ಗಜಾನನ , ದ್ವೈತಾಮ್ತ್ರೇಯ , ಮುನಿಸ್ತುತ್ಯ , ಭಕ್ತವಿಘ್ನವಿನಾಶನ , ಏಕದಂತ , ಚತುರ್ಬಾಹವೇ, ಚತುರ , ಶಕ್ತಿಸಂಯುತ , ಲಂಬೋದರ , ಶೂರ್ಪಕರ್ಣ , ಹರಾಯ , ಬ್ರಹ್ಮವಿದುತ್ತಮ , ಕಲಾ , ಗ್ರಹಪಾತ , ಕಾಮಿನಾ , ಸೋಮಸೂರ್ಯಾಗ್ನಿಲೋಚನ , ಪಾಶಾಂಕುಶಧರ , ಚಂದ , ಗುಣಾತೀತ , ನಿರಂಜನ , ಅಕಲ್ಮಶಾ , ಸ್ವಯಂಸಿದ್ಧ , ಸಿದ್ಧಾರ್ಚಿತಪದಾಂಬುಜ , ಬಿಜಾಪುರಫಲಾಸಕ್ತ , ವರದಾ , ಶಾಶ್ವತ , ಕೃತಿನಿ, ದ್ವಿಜಪ್ರಿಯಾ , ವಿತಭಯ , ಗಾಡಿನಿ , ಚಕ್ರಿಣಿ , ಇಕ್ಷುಚಾಪಧೃತಿ , ಶ್ರೀದಯಾ , ಅಜ , ಉತ್ಪಾಲಕರ , ಶ್ರೀಪತಿ , ಸ್ತುತಿಹರ್ಷಿತಾ , ಕುಲದ್ರಿಭೆತ್ರಿ , ಜಟಿಲ , ಕಲಿಕಲ್ಮಶನಾಸನ , ಕಾಂತಾ , ಪಾಪಹಾರಿಣಿ , ಸಮಾಹಿತ , ಆಶ್ರಿತಾ , ಶ್ರೀಕರ , ಸೌಮ್ಯ , ಕೈವಲ್ಯಸುಖದ
ಭಕ್ತವಂಚಿತದಾಯಕ , ಶಾಂತಾ , ಜ್ಞಾನಿ ಸಚ್ಚಿದಾನಂದವಿಗ್ರಹ , ದಯಾಯುತ , ಏಕದಂತ , ಬ್ರಹ್ಮದ್ವೇಷವಿವರ್ಜಿತಾ , ಪ್ರಮತ್ತ , ದೈತ್ಯಭಯದ , ಶ್ರೀಕಂಠ , ವಿಭುದೇಶ್ವರ , ರಾಮರ್ಚಿತ , ವಿಧಾಯಿ , ಸ್ಥೂಲಕಂಠ , ನಾಗರಾಜಯಜ್ಞೋಪವೀತವತಿ ; ಸ್ವಯಂಕರ್ತ್ರಿ, ಸಮಘೋಷಪ್ರಿಯ , ಪರಸ್ಮಿ , ಸ್ಥೂಲತುಂಡ , ಅಗ್ರಣಿ , ಧೀರಾ , ವಾಗೀಶ , ಸಿದ್ಧಿದಾಯಕ , ದೂರ್ವಬಿಲ್ವಪ್ರಿಯ , ಅವ್ಯಕ್ತಮೂರ್ತಿ , ಹೃಷ್ಟಾ , ಅದ್ಭುತಮೂರ್ತಿಮತಿ , ಮೂಷಿಕವಾಹನ ,
ಶೈಲೇಂದ್ರತನುಜೋತ್ಸಂಗ , ಸಮಸ್ತಜಗದಾಧರ , ಖೇಲನೋತ್ಸುಕಮಾನಸ , ಮಾಯಿನಿ , ತುಷ್ಟ , ಸ್ವಲವಣ್ಯಸುಧಾಸಾರಾಜಿತಾ , ಮನ್ಮಥವಿಗ್ರಹಾ , ಪ್ರಸನ್ನಾತ್ಮನಿ , ಸರ್ವಸಿದ್ಧಿಪ್ರದಾಯಕ ಹೀಗೆ ಅನೇಕಾನೇಕ ನಾಮಾಂಕಿತನಾದ ದೇವಗಣಗಳ ಒಡೆಯ ಶ್ರೀ ಗಣೇಶನ ಹಬ್ಬ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಮನ್ನಣೆಯನ್ನು ಪಡೆದ ಮತ್ತು ವೈಭವದಿಂದ ಆಚರಿಸಲ್ಪಡುವ ಹಬ್ಬವಾಗಿದೆ.
ಭಾರತದಲ್ಲಿ ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನದಂದು ಮಹಾಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿದ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಿ ಗಣೇಶ ಚತುರ್ಥಿಯು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾಗಿದೆ. ಇದು ವಿದ್ಯೆಯ ಮತ್ತು ಜ್ಞಾನದ ಅಧಿಪತಿ, ಸಂಪತ್ತು ಮತ್ತು ಅದೃಷ್ಟದ ಅಧಿನಾಯಕನಾದ ಗಣಪತಿಯ ಜನನವನ್ನು ಸಾರುವ ಹಬ್ಬ. ಈ ಹಬ್ಬವನ್ನು ವಿನಾಯಕ ಚತುರ್ಥಿ ಅಥವಾ ಗಣೇಶ ಚತುರ್ಥಿ ಇಲ್ಲವೇ ಚೌತಿ ಎಂದು ಸಹ ಕರೆಯುತ್ತಾರೆ. ಇದನ್ನು ಹಿಂದೂಗಳೆಲ್ಲರು ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತಾರೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ .ನಮ್ಮ ಗುರು ಹಿರಿಯರು ನಮಗೆ ಹೇಳಿರುವ ಕಥೆಗಳ ಪ್ರಕಾರ ಕೈಲಾಸಾಧಿಪತಿ ಶಿವನ ಪತ್ನಿ ಪಾರ್ವತಿಯು ಗಣಪತಿಯ ತಾಯಿ. ಕಥೆಯ ಪ್ರಕಾರ ಗಣಪನನ್ನು , ಪಾರ್ವತಿಯು ಮಣ್ಣಿನಿಂದ ಒಂದು ವಿಗ್ರಹವನ್ನು ಮಾಡಿ ನಂತರ ಜೀವ ತುಂಬುವ ಮೂಲಕ ಜನ್ಮ ನೀಡಿದಳು. ಹಾಗಾಗಿ ಸ್ವರ್ಣಗೌರಿಯ ಮಾನಸ ಪುತ್ರನೀತ ಎಂದು ಹೇಳಲಾಗುತ್ತದೆ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪನು ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ. ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋಧಿಸುತ್ತಾಳೆ. ಜೊತೆಗೆ ರೌದ್ರಾವತಾರ ತಾಳಿದ ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ. ಶಿವಗಣಗಳೆಲ್ಲರೂ ಹುಡುಕುತ್ತಾ ಹೋದಾಗ ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಶಿವನು ಆನೆಯ ತಲೆಯನ್ನು ಗಣಪನ ಶರೀರಕ್ಕೆ ಅಂಟಿಸಿ ಜೀವದಾನ ಮಾಡುತ್ತಾನೆ. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ. ವಿಘ್ನ ವಿನಾಶಕ ವಿನಾಯಕನಾಗಿ ಶಾಶ್ವತ ಸ್ಥಾನವನ್ನು ಪಡೆದಿರುತ್ತಾನೆ. ಈ ಹಬ್ಬದಲ್ಲಿ ಮೊದಲ ದಿನ ತಾಯಿ ಸ್ವರ್ಣಗೌರಿಯ ಹಬ್ಬವಾಗಿರುತ್ತದೆ. ಮಾರನೆ ದಿನವೇ ಗಣೇಶನ ಹಬ್ಬ. ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಬಂದು, ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂತಿರುಗುತ್ತಾನೆ ಎಂಬ ನಂಬಿಕೆಯೂ ನಮ್ಮಲ್ಲಿದೆ.
ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಮನೆ ಮಂದಿಯೆಲ್ಲ ಒಂದಾಗಿ ಸೇರುತ್ತಾರೆ. ಹಬ್ಬದ ದಿನ ಹಬ್ಬವನ್ನು ಆಚರಿಸುವ ಎಲ್ಲರ ಮನಸ್ಸಿನಲ್ಲೂ ಮನೋಲ್ಲಾಸ ತುಂಬಿರುತ್ತದೆ. ಏನೋ ಒಂದು ತರಹದ ಹುರುಪು. ಹಬ್ಬದ ನಂತರದ ದಿನಗಳು ಶುಭದಿನಗಳಾಗಲಿವೆ ಎಂಬ ನವ ಚೈತನ್ಯದ ನಂಬಿಕೆ. ಮನೆಗೆ ಸುಣ್ಣ ಬಣ್ಣಗಳನ್ನು ಪೂಸಿ, ತಳಿರು ತೋರಣಗಳಿಂದ ಶೃಂಗಾರ ಮಾಡಲಾಗುತ್ತದೆ. ಎಲ್ಲರೂ ಸ್ನಾನ್ಹಾನ್ನಿಕೆಗಳನ್ನು ಮಾಡಿ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ದೇವರ ಫೋಟೋ, ವಿಗ್ರಹಗಳಿಗೆ ವಿಶೇಷವಾಗಿ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗುತ್ತದೆ. ಒಳಿತಾಗಲೆಂದು ಪೂಜೆ ಸಲ್ಲಿಸಲಾಗುತ್ತದೆ. ಧೂಪ, ದೀಪಗಳ ನೈವೇದ್ಯದ ಆರತಿ ಬೆಳಗಲಾಗುತ್ತದೆ. ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳು ಎಷ್ಟೇ ಬೆಲೆಯಾದರೂ ಕೊಂಡುಕೊಳ್ಳಲು ಜನ ನೂಕುನುಗ್ಗಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಹಲವಾರು ಸಿಹಿ ಅಡುಗೆ ಮತ್ತು ಖಾದ್ಯಗಳನ್ನುಮಾಡಿ ಸಂತೋಷದಿಂದ ಎಲ್ಲರೂ ಒಂದುಗೂಡಿ ಊಟ ಮಾಡುತ್ತಾರೆ. ಆದರೂ ಗಣಪತಿಯ ಪ್ರಿಯ ಪದಾರ್ಥವಾದ ಮೋದಕಕ್ಕೆ ಈ ಹಬ್ಬದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಇದು ಗಣಪತಿಯ ನೆಚ್ಚಿನ ತಿಂಡಿ. ಆದ್ದರಿಂದ ಇದನ್ನು ತಪ್ಪದೆ ಮಾಡಲಾಗುತ್ತದೆ. ಜೊತೆಗೆ ಖರ್ಜಿ ಕಾಯಿ, ಲಾಡು, ಬರ್ಫಿ ಮತ್ತು ಪೇಡಾಗಳನ್ನು ಸಹ ಮಾಡಲಾಗುತ್ತದೆ. ಈ ದಿನ ದೇವಾಲಯಗಳಲ್ಲಿ ವಿಶೇಷವಾಗಿ ಪೂಜೆ ನಡೆಯುತ್ತದೆ. ದೇವಾಲಯಗಳಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಿರುತ್ತದೆ. ಸ್ಥಳೀಯ ಸಂಘ ಸಂಸ್ಥೆಗಳು ಪೆಂಡಾಲ್ಗಳನ್ನು ಹಾಕಿ ಬೃಹತ್ ಗಣಪತಿಯ ವಿಗ್ರಹಗಳನ್ನು ಇರಿಸುತ್ತಾರೆ. ಈ ಪೆಂಡಾಲ್ಗಳಲ್ಲಿ ಗಣಪತಿಯ ಉತ್ಸವವದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತವೆ. ಕೊನೆಯ ದಿನದಂದು ಗಣಪತಿಯ ಮೂರ್ತಿಯನ್ನು ಆ ಪ್ರದೇಶದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಗುತ್ತದೆ. ಜನರು ಸಹ ಉತ್ಸಾಹದಿಂದ ಅದರಲ್ಲಿ ಕುಣಿಯುತ್ತಾ ಮತ್ತು ಹಾಡುತ್ತ ಪಾಲ್ಗೊಳ್ಳುತ್ತಾರೆ. ಕೊನೆಗೆ ಗಣಪತಿಯನ್ನು ಹತ್ತಿರದ ಕೆರೆ, ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. ಹೀಗೆ ಈ ದಿನ ಭಕ್ತಾಧಿಗಳು ತಮ್ಮ ಸಂತೋಷ ಮತ್ತು ಪ್ರಾರ್ಥನೆಗಳನ್ನು ಗಣಪತಿಗೆ ಅರ್ಪಿಸುತ್ತಾರೆ.
ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನಗಳು ಆನೆಯ ಮುಖವುಳ್ಳ ದೇವನಾದ ಗಜಮುಖನನ್ನು ಪೂಜಿಸಿದರು. ಗೋದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿದರು. ಹೀಗೆ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು. ಇದಲ್ಲದೇ ಗಣಪತಿಯನ್ನು ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಚೀನಾ, ಸುಮಾತ್ರಾ, ಜಾವಾ, ಜಪಾನ್ ಮತ್ತಿತರ ದೇಶಗಳಲ್ಲಿಯೂ ಪೂಜಿಸುತ್ತಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೋಡಿದಾಗ ಲೋಕಮಾನ್ಯ ಬಾಲಗಂಗಾಧರ ತಿಲಕರು ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ. ನಮ್ಮ ಕರ್ನಾಟಕದಲ್ಲಿಯೂ ಗಣೇಶ ಚತುರ್ಥಿ ಹಬ್ಬವು ವಿಶೇಷವಾಗಿ ಸಡಗರ ಸಂಭ್ರಮಗಳಿಂದ ಆಚರಿಸಲಾಗುತ್ತದೆ. ಪ್ರಥಮೇಶ್ವರ ಗಣನಾಥನನ್ನು ಪೂಜಿಸಿ , ಪ್ರಾರ್ಥಿಸುವ ಮೂಲಕ ನಮ್ಮ ಮನೆ ಮನಗಳಿಂದ ಹಿಡಿದು ಇಡೀ ಲೋಕಕ್ಕೇ ಅಂಟಿರುವ ವಿಘ್ನಗಳನ್ನು ನಿವಾರಿಸೆಂದು ಬೇಡೋಣ. ಸರ್ವರಿಗೂ ಶುಭವಾಗಲೆಂದು ಪ್ರಾರ್ಥಿಸೋಣ .