ನಮ್ಮ ದೇಹವನ್ನು ನಂಜು ನಿವಾರಕ ಅಂದರೆ ಡಿಟಾಕ್ಸ್ ಮಾಡಿಕೊಳ್ಳಬೇಕೆಂಬ ಹಂಬಲ ಯಾರಿಗೆ ತಾನೇ ಇರುವುದಿಲ್ಲ. ಇದಕ್ಕಾಗಿ ಕೆಲವೊಂದು ಆಹಾರ ಪದಾರ್ಥಗಳು ಇವೆ. ಇವುಗಳು ಅನಾರೋಗ್ಯವನ್ನು ಉಂಟು ಮಾಡುವ ಆಹಾರ ಪದಾರ್ಥಗಳ ಮೇಲೆ ಪರಿಣಾಮಕಾರಿಯಾಗಿ ಹೋರಾಡಿ ನಮ್ಮ ದೇಹವನ್ನು ನಂಜು ನಿವಾರಕಗೊಳಿಸುತ್ತವೆ.
ತಜ್ಞರ ಪ್ರಕಾರ ನಮ್ಮ ದೇಹವನ್ನು ಡಿಟಾಕ್ಸ್ ಮಾಡಿಕೊಳ್ಳುವುದರಿಂದ ದೇಹದಲ್ಲಿರುವ ಹೆಚ್ಚಿನ ಪೌಂಡ್ಗಳನ್ನು ಕರಗಿಸುವುದಷ್ಟೇ ಅಲ್ಲ, ನಮ್ಮ ದೇಹ ಮತ್ತು ಮೂಡನ್ನು ಸಹ ಚಟುವಟಿಕೆಯಿಂದ ಇರಿಸಬಹುದಂತೆ.
ಬೆಳ್ಳುಳ್ಳಿ
ಬೆಳ್ಳುಳ್ಳಿಯು ಹೃದಯಕ್ಕೆ ತುಂಬಾ ಒಳ್ಳೆಯದು, ಇದರ ಜೊತೆಗೆ ಇದು ವೈರಸ್ ನಿರೋಧಕ ಮತ್ತು ಆಂಟಿ ಬಯೊಟಿಕ್ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ದೇಹದಲ್ಲಿರುವ ನಂಜಿನ ಆಂಶವನ್ನು ನಿವಾರಿಸಲು ಸಹಕರಿಸುತ್ತದೆ. ಬೆಳ್ಳುಳ್ಳಿಯಲ್ಲಿ ಅಲ್ಲಿಸಿನ್ ಎಂಬ ಅಂಶವು ಇರುತ್ತದೆ. ಇದು ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಉತ್ಪಾದಿಸುವ ಗುಣಗಳನ್ನು ಹೊಂದಿದೆ ಮತ್ತು ಟಾಕ್ಸಿನ್ಗಳ ವಿರುದ್ಧ ಹೋರಾಡುತ್ತದೆ. ಅದಕ್ಕಾಗಿ ಬೆಳ್ಳುಳ್ಳಿಯನ್ನು ಜಜ್ಜಿ, ನಿಮ್ಮ ಆಹಾರದಲ್ಲಿ ಬೆರೆಸುವುದನ್ನು ಮರೆಯಬೇಡಿ.
ಗ್ರೀನ್ ಟೀ
ನಿಮ್ಮ ದೇಹವನ್ನು ಡಿಟಾಕ್ಸ್ ಮಾಡಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗವೆಂದರೆ ಗ್ರೀನ್ ಟೀಯನ್ನು ಸೇವಿಸುವುದು. ಇದು ನಿಮ್ಮ ದೇಹದಲ್ಲಿರುವ ಟಾಕ್ಸಿನ್ಗಳನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಇದು ಆಂಟಿ ಆಕ್ಸಿಡೆಂಟ್ಗಳ ಸಮೃದ್ಧ ಕಣಜವಾಗಿದೆ. ಅಲ್ಲದೆ ಕರುಳಿನ ಕಾಯಿಲೆಗಳನ್ನು, ಕರುಳಿನಲ್ಲಿ ಕೊಬ್ಬಿನಿಂದ ಬರುವ ರೋಗಗಳನ್ನು ತಡೆಯುವಲ್ಲಿ ನೆರವಾಗುತ್ತದೆ.
ಶುಂಠಿ
ಕೊಬ್ಬಿನಿಂದ ಕೂಡಿದ ಆಹಾರ ಮತ್ತು ಆಲ್ಕೋಹಾಲ್ಗೆ ದಾಸರಾಗಿದ್ದೀರಾ? ಅದು ನಿಮ್ಮ ಜೀರ್ಣಾಂಗ ವ್ಯೂಹವನ್ನು ಅಲ್ಲೋಲ ಕಲ್ಲೋಲ ಮಾಡಿ ಬಿಡುತ್ತದೆ. ಅದಕ್ಕಾಗಿ ನಾಸಿಯಾದಿಂದ ಮುಕ್ತಿ ಹೊಂದಲು, ಜೀರ್ಣ ಕ್ರಿಯೆಯನ್ನು ಸುಧಾರಿಸಲು, ಗ್ಯಾಸ್ ಮತ್ತು ಹೊಟ್ಟೆ ಉಬ್ಬಿಕೊಳ್ಳುವ ಸಮಸ್ಯೆಯಿಂದ ಮುಕ್ತಿ ಹೊಂದಲು ಶುಂಠಿಯನ್ನು ಸೇವಿಸಿ. ಶುಂಠಿಯು ಸಹ ಆಂಟಿ ಆಕ್ಸಿಡೆಂಟ್ ಆಗಿರುವುದರಿಂದ ಇದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ಕತ್ತರಿಸಿದ ಶುಂಠಿಯನ್ನು ಜ್ಯೂಸ್ಗಳಲ್ಲಿ ಹಾಕಿ ಅಥವಾ ನಿಯಮಿತವಾಗಿ ಶುಂಠಿ ಟೀಯನ್ನು ಸೇವಿಸಿ.
ನಿಂಬೆ
ಇದೊಂದು ಪ್ರಸಿದ್ಧವಾದ ಡಿಟಾಕ್ಸ್ ಆಹಾರವಾಗಿದೆ. ನಿಂಬೆಹಣ್ಣುಗಳಲ್ಲಿ ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್ಗಳು ಅಧಿಕವಾಗಿರುತ್ತವೆ. ಇದು ತ್ವಚೆಯ ಮೇಲೆ ಅದ್ಭುತವಾದ ಪರಿಣಾಮವನ್ನು ಬೀರುತ್ತದೆ ಮತ್ತು ರೋಗ ಕಾರಕ ಫ್ರೀ ರ್ಯಾಡಿಕಲ್ಗಳ ವಿರುದ್ಧ ಹೋರಾಡುತ್ತದೆ. ನಿಂಬೆಗಳು ಸಹ ದೇಹದ ಮೇಲೆ ಅಲ್ಕಾಲೈನ್ ಪರಿಣಾಮವನ್ನು ಬೀರುತ್ತವೆ. ಇದರರ್ಥ ಇದು ನಿಮ್ಮ ದೇಹದಲ್ಲಿ ಪಿಎಚ್ ಸಮತೋಲನವನ್ನು ಮರು ಸ್ಥಾಪಿಸುತ್ತದೆ. ಅದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿನಿತ್ಯ ಸ್ವಲ್ಪ ಪ್ರಮಾಣದ ನಿಂಬೆರಸವನ್ನು ಬಿಸಿ ನೀರಿಗೆ ಬೆರೆಸಿಕೊಂಡು ಕುಡಿಯುವುದರೊಂದಿಗೆ ನಿಮ್ಮ ದಿನವನ್ನು ಆರಂಭಿಸಿ. ಇದು ನಿಮ್ಮ ದೇಹದಲ್ಲಿರುವ ಟಾಕ್ಸಿನ್ಗಳನ್ನು ಹೊರ ಹಾಕುವುದರ ಜೊತೆಗೆ, ನಿಮ್ಮ ಇಡೀ ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತದೆ.
ಬೀಟ್ರೂಟ್ಗಳು
ಬೀಟ್ರೂಟ್ಗಳಲ್ಲಿ ಮ್ಯೆಗ್ನಿಶಿಯಂ, ಕಬ್ಬಿಣ ಮತ್ತು ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಸಂಪೂರ್ಣವಾಗಿ ಆರೋಗ್ಯಕಾರಿ ಪ್ರಯೋಜನಗಳನ್ನು ನೀಡುತ್ತದೆ. ಈ ಸೂಪರ್ ಫುಡ್ ನಿಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡುತ್ತದೆ ಮತ್ತು ಕರುಳಿನಲ್ಲಿರುವ ಟಾಕ್ಸಿನ್ಗಳನ್ನು ಹೊರಹಾಕುತ್ತದೆ. ಬೀಟ್ರೂಟ್ಗಳನ್ನು ಕಚ್ಛಾ ಆಗಿ ಅಥವಾ ಬೇಯಿಸಿಕೊಂಡು ಸೇವಿಸಬಹುದು. ಇದಲ್ಲದೆ ನೀವು ಬೀಟ್ರೂಟ್ ಜ್ಯೂಸ್ ಸಹ ಸೇವಿಸಬಹುದು.
ಕುಸುಬಲಕ್ಕಿ
ಕುಚ್ಚಲಕ್ಕಿಯಲ್ಲಿ ಡಿಟಾಕ್ಸ್ ಮಾಡುವಂತಹ ಪೋಷಕಾಂಶಗಳಾದ ಬಿ ವಿಟಮಿನ್ಗಳು, ಮ್ಯೆಗ್ನಿಶಿಯಂ, ಮ್ಯಾಂಗನೀಸ್ ಮತ್ತು ರಂಜಕಗಳು ಇರುತ್ತವೆ. ಇದರಲ್ಲಿ ನಾರಿನಂಶವು ಸಹ ಅಧಿಕವಾಗಿರುತ್ತದೆ. ಅದು ಕೋಲನ್ ಅನ್ನು ಸ್ವಚ್ಛಗೊಳಿಸುತ್ತದೆ. ಇದರಲ್ಲಿರುವ ಸಮೃದ್ಧ ಸೆಲೆನಿಯಮ್, ಕರುಳನ್ನು ಸುಗಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ ಮತ್ತು ತ್ವಚೆಯ ಬಣ್ಣವನ್ನು ಸುಧಾರಿಸುತ್ತದೆ.