ಬೆಳ್ತಂಗಡಿ:ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ನೀರು ಮಲಿನವಾಗುವುದನ್ನು ತಡೆಯಲು ನದಿ ಸುತ್ತಲಿನ ಅಂಗಡಿಗಳಲ್ಲಿ ಸೋಪು, ಶ್ಯಾಂಪೂಗಳ ಮಾರಾಟ ಬಳಕೆಯನ್ನು ನಿಷೇಧಿಸಲಾಗಿದೆ.
ಈ ಕುರಿತು ಧರ್ಮಸ್ಥಳ ಗ್ರಾಮ ಪಂಚಾಯತ್ ಸಭೆಯಲ್ಲಿ ವಿಚಾರಣೆ ನಡೆಸಿ ನಿರ್ಧಾರ ಕೈಗೊಂಡಿದ್ದು ನದಿ ಸುತ್ತಲಿನ ಅಂಗಡಿಗಳಲ್ಲಿ ಸಾಬೂನು, ಶಾಂಪೂ ಮಾರಾಟ ಮಾಡದಂತೆ ನೋಟಿಸ್ ನೀಡಲಾಗಿದೆ.
ಈಗಾಗಲೇ ಪ್ರತಿನಿತ್ಯ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಸ್ನಾನ ಘಟ್ಟದಲ್ಲಿ ಸ್ವಚ್ಛತೆ ಕಾಪಾಡುವಂತೆ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದರೂ ಯಾತ್ರಿಕರು ನದಿಗೆ ಬಟ್ಟೆ ಎಸೆಯುವುದು, ಸೋಪು, ಶಾಂಪೂ ಬಳಸಿ ಅದರ ಪ್ಲಾಸ್ಟಿಕ್ ನದಿಗೆ ಎಸೆಯುವುದು ಕಂಡುಬರುತ್ತಿದ್ದ ಹಿನ್ನೆಲೆಯಲ್ಲಿ ಪಂಚಾಯತ್ ವತಿಯಿಂದಲೂ ಯಾತ್ರಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗಿದೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.