ಮೈಸೂರು: ಅಂದಕಾಸುರ ಸಂಹಾರಕ್ಕೆ ವಿರೋಧ ವ್ಯಕ್ತಪಡಿಸಿದ ದಲಿತ ಸಂಘರ್ಷ ಸಮಿತಿ ಸದಸ್ಯರು ನಂಜುಂಡೇಶ್ವರ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಸಹ ಅಂದಕಾಸುರ ಸಂಹಾರವನ್ನು ಆಯೋಜಿಸಲಾಗಿತ್ತು. ನಿನ್ನೆ (ಡಿ.26) ರಂದು ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದ ಬಳಿ ಇರುವ ರಾಕ್ಷಸ ಮಂಟಪದ ಮುಂದೆ ಅಂದಕಾಸುರನ ಚಿತ್ರವನ್ನು ರಂಗೋಲಿ ಮೂಲಕ ಬಿಡಿಸಲಾಗಿತ್ತು.
ಬಳಿಕ ನಂಜುಂಡೇಶ್ವರ, ಪಾರ್ವತಿ ದೇವರ ಉತ್ಸವ ಮೂರ್ತಿ ಹೊತ್ತವರು ಆ ಮಂಟಪದ ಬಳಿ ಬಂದು ಅಂದಕಾಸುರನ ರಂಗೋಲಿಯನ್ನು ಕಾಲಿನಿಂದ ಅಳಿಸಿ ಹಾಕುತ್ತಾರೆ. ಈ ಮೂಲಕ ಅಂದಕಾಸುರನ ಸಂಹಾರ ದಿನ ಆಚರಿಸಲಾಗುತ್ತದೆ. ಈ ಆಚರಣೆಯನ್ನು ಮೈಸೂರು ಜಿಲ್ಲೆಯ ವಿವಿಧ ಊರುಗಳಲ್ಲಿ ಆಚರಿಸಲಾಗುತ್ತದೆ. ಮಂಗಳವಾರ ನಡೆಯುತ್ತಿದ್ದ ಈ ಆಚರಣೆಗೆ ದಲಿತ ಹೋರಾಟ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. “ನಾವು ಮಹಿಷಾಸುರನನ್ನು ರಾಜ ಎಂದು ಪೂಜಿಸುತ್ತೇವೆ. ಇದು ನಮ್ಮ ಭಾವನೆಗೆ ದಕ್ಕೆಯಾಗುತ್ತೆ” ಎಂದು ದಲಿತ ಸಮಿತಿ ಮುಖಂಡರು ಪಟ್ಟು ಹಿಡಿದಿದ್ದರು.
ತಲತಲಾಂತರದಿಂದ ಈ ಪದ್ದತಿ ಆಚರಿಸಿಕೊಂಡು ಬರಲಾಗುತ್ತಿದೆ” ಎಂದು ಭಕ್ತರು ಹೇಳಿದ್ದರು. ಈ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಈ ವೇಳೆ ಉತ್ಸವ ಮೂರ್ತಿ ಮೇಲೆ ಕಿಡಿಗೇಡಿಗಳು ನೀರು ಎರಚಿದ್ದರು.
ನೀರು ಎರಚಿದವರ ವಿರುದ್ಧ ದೂರು ದಾಖಲು
ನಮ್ಮ ಧಾರ್ಮಿಕ ಆಚರಣೆಗೆ ಅಡ್ಡಿ ಪಡಿಸಿದ್ದಾರೆ. ಕುಡಿಯುವ ನೀರಿನ ಬಾಟಲಿ ಮೂಲಕ ಉತ್ಸವ ಮೂರ್ತಿಗೆ ನೀರು ಎರಚಿ ಅಪಮಾನ ಮಾಡಿದ್ದಾರೆ. ನಾವು ಯಾವುದೇ ವ್ಯಕ್ತಿಯನ್ನು ಅಪಮಾನ ಮಾಡುವ ಕೆಲಸ ಮಾಡಿಲ್ಲ ಎಂದು ದಲಿತ ಸಮಿತಿ ಸದಸ್ಯರಿಗೆ ತಿಳಿಸಿದೇವು. ಆದರೂ ಕೆಲ ಜನರು ಉತ್ಸವ ಮೂರ್ತಿಯ ಮೇಲೆ ಕುಡಿಯುವ ನೀರಿನ ಬಾಟಲಿನಿಂದ ನೀರು ಎರಚ್ಚಿದ್ದಾರೆ. ಇದು ಭಕ್ತಾದಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಅವರು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಗೆ ಸಂಬಂಧ ಬಾಲರಾಜು, ನಾರಾಯಣ, ಅಭಿ ನಾಗಭೂಷಣ, ನಟೇಶ್, ಅಭಿ ಎಂಬುವರ ವಿರುದ್ಧ ದೂರು ದಾಖಲಾಗಿದೆ.