’ಟಗರು ಪುಟ್ಟಿ’ ಎಂದೇ ಚಂದನವನದಲ್ಲಿ ಹೆಸರು ಮಾಡಿದ ಮಾನ್ವಿತಾ ಕಾಮತ್ ಅವರಿಗೆ ಮಾತೃ ವಿಯೋಗ ಆಗಿದೆ. ಮಾನ್ವಿತಾ ತಾಯಿ ಸುಜಾತಾ ಅವರು ಹಲವು ತಿಂಗಳುಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ಈಗ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕಳೆದ ವರ್ಷ ಮಾನ್ವಿತಾ ತಾಯಿಯ ಚಿಕಿತ್ಸೆಗೆ ಸೋನು ಸೂದ್, ನಿರ್ಮಾಪಕ ಕೆಪಿ ಶ್ರೀಕಾಂತ್, ನಿರ್ಮಾಪಕ ನಾಗಿ ಅವರು ಸಹಾಯ ಮಾಡಿದ್ದರು. ’ಟಗರು ಪುಟ್ಟಿ’ ನಟಿ ಮಾನ್ವಿತಾ ಕಾಮತ್ ಅವರ ತಾಯಿ ಸುಜಾತಾ ಕಾಮತ್ ಅವರು ನಿಧನರಾಗಿದ್ದಾರೆ. ಕೆಲ ಸಮಯದಿಂದ ಮಾನ್ವಿತಾ ತಾಯಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು (ಏಪ್ರಿಲ್ ೧೫) ಅವರು ನಿಧನರಾಗಿದ್ದಾರೆ.
ಮಾನ್ವಿತಾ ಕಾಮತ್ ಅವರ ತಾಯಿ ಸುಜಾತಾಗೆ ಕಿಡ್ನಿ ಸಮಸ್ಯೆ ಇತ್ತು. ಅವರಿಗೆ ಕಿಡ್ನಿ ಕಸಿ ಮಾಡಿಸಲಾಗಿತ್ತು. ಅಷ್ಟೇ ಅಲ್ಲದೆ ೨ ಬಾರಿ ಹೃದಯಾಘಾತ ಕೂಡ ಆಗಿತ್ತಂತೆ. ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸುಜಾತಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಮಾನ್ವಿತಾ ಅವರು ತಾಯಿ ಉಳಿಸಿಕೊಳ್ಳಲು ತುಂಬ ಪ್ರಯತ್ನಪಟ್ಟರೂ ಕೂಡ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿಯೇ ಮಾನ್ವಿತಾ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಗ ಅವರು ಸಾಲು ಸಾಲು ಟ್ವೀಟ್ ಮಾಡಿ ತಾಯಿಗೆ ಚಿಕಿತ್ಸೆ ಕೊಡುವಲ್ಲಿ ಸಹಾಯ ಮಾಡಿದವರಿಗೆ ಧನ್ಯವಾದ ತಿಳಿಸಿದ್ದಾರೆ. ನಿರ್ಮಾಪಕ ಕೆಪಿ ಶ್ರೀಕಾಂತ್, ನಾಗಿ, ನಟ ಪ್ರೇಮ್, ಸೋನು ಸೂದ್ ಅವರು ಮಾನ್ವಿತಾ ತಾಯಿಗೆ ಸಹಾಯ ಮಾಡಿದ್ದನ್ನು ಸಹ ಸ್ಮರಿಸಿದ್ದಾರೆ.