ಬೆಂಗಳೂರು: ‘ನನ್ನ ನಾಮಪತ್ರ ತಿರಸ್ಕೃತ ಆಗಬೇಕೆಂದು ಬಿಜೆಪಿ, ಮುಖ್ಯಮಂತ್ರಿ ಕಚೇರಿ ಮತ್ತು ಕಾನೂನು ಘಟಕ ಷಡ್ಯಂತ್ರ ರೂಪಿಸಿದ್ದವು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಶಾಸಕ ಪ್ರಿಯಾಂಕ ಖರ್ಗೆ ಜೊತೆ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ನಾಮಪತ್ರ ಜೊತೆ ಸಲ್ಲಿಸಿದ ನನ್ನ ಪ್ರಮಾಣಪತ್ರ ಅತಿ ಹೆಚ್ಚು ಡೌನ್ಲೋಡ್ ಆಗಿದೆ. ನಾಮಪತ್ರ ಪರಿಶೀಲನೆಯ ವೇಳೆ ದೊಡ್ಡ ಕಾನೂನು ತಂಡ ಕನಕಪುರದಲ್ಲಿ ನಿಂತುಕೊಂಡಿತ್ತು. ನನ್ನ ನಾಮಪತ್ರವನ್ನು ತಿರಸ್ಕೃತಗೊಳಿಸಬೇಕು ಎನ್ನುವುದು ಉದ್ದೇಶವಾಗಿತ್ತು’ ಎಂದು ದೂರಿದರು.
‘ನನ್ನ ಮಾತ್ರವಲ್ಲದೆ, ಕಾಂಗ್ರೆಸ್ ಪಕ್ಷದ ಹಲವು ಅಭ್ಯರ್ಥಿಗಳ ನಾಮಪತ್ರದ ಜೊತೆಗೆ ಸಲ್ಲಿಸಿದ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕು‘ ಎಂದು ಆಗ್ರಹಿಸಿದರು.
‘ಸವದತ್ತಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೇರಿದಂತೆ ಹಲವು ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರದಲ್ಲಿ ಸಮಸ್ಯೆ ಇದೆ. ನನ್ನ ನಾಮಪತ್ರ ತಿರಸ್ಕೃತಗೊಳಿಸಲು ಪ್ರಯತ್ನ ಮಾಡಿದರು. ನನಗೆ ಹೀಗಾದರೆ, ಸಾಮಾನ್ಯ ಅಭ್ಯರ್ಥಿಗಳ ಕತೆ ಏನು? ಚುನಾವಣಾ ಆಯೋಗ ಯಾವುದೇ ಒತ್ತಡಕ್ಕೆ ಮಣಿಯಬಾರದು. ಮುಖ್ಯಮಂತ್ರಿ ಕಚೇರಿ ಮೂಲಕವೇ ಡೌನ್ಲೋಡ್ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಕಚೇರಿಯ ದೂರವಾಣಿ ಮಾಹಿತಿ ಪಡೆದುಕೊಂಡು ತನಿಖೆ ಮಾಡಬೇಕು‘ ಎಂದೂ ಅವರು ಆಗ್ರಹಿಸಿದರು.
ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರ ಆರೋಪಕ್ಕೆ ತಿರುಗೇಟು ನೀಡಿದ ಶಿವಕುಮಾರ್, ‘ನಾನು ಶೇ 40 ಕಮಿಷನ್ ಹೊಡೆದಿಲ್ಲ. ಅಭ್ಯರ್ಥಿಗಳ ಟಿಕೆಟ್ ಅರ್ಜಿಗೆ ಹಣ ಪಡೆದಿದ್ದೇವೆ. ಕಟ್ಟಡ ನಿಧಿ ಎಂದು ಪಡೆದಿದ್ದೇವೆ. ನಿಮ್ಮ ಶೇ 40 ಕಮಿಷನ್ ಗೆ ಹಲವು ಸಾಕ್ಷ್ಯಗಳು ಸಿಕ್ಕಿವೆ. ಮಾಡಾಳ್ ಪ್ರಕರಣವೇ ಇದಕ್ಕೆ ಸಾಕ್ಷಿ’ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮೇಲೆ ಬಿಜೆಪಿ ನಿಗಾ ಇಟ್ಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಜಗದೀಶ ಶೆಟ್ಟರ್ ನಮ್ಮ ನಾಯಕರು. ತಾರಾ ಪ್ರಚಾರಕರು. ಅವರ ವಿರುದ್ಧ ಯಾವ ಷಡ್ಯಂತ್ರವೂ ನಡೆಯಲ್ಲ’ ಎಂದರು.
ಕಾಂಗ್ರೆಸ್ ಸೇರಲು ಬಂದಿದ್ದ ಚಿತ್ತಾಪುರ ಕ್ಷೇತ್ರ ಮಾಜಿ ಶಾಸಕ, ಬಿಜೆಪಿ ಮುಖಂಡ ವಿಶ್ವನಾಥ ಪಾಟೀಲ ಅವರನ್ನು ತೋರಿಸಿದ ಡಿಕೆಶಿ, ’ಬಿಜೆಪಿ ಅಣೆಕಟ್ಟೆ ಈಗಾಗಲೇ ಒಡೆದು ನೀರು ಬರುತ್ತಾ ಇದೆ. ಇಲ್ಲಿ ಬಂದಿದೆ ನೋಡಿ. ಬಿಜೆಪಿ ಕೆರೆ, ಬಾವಿ ಎಲ್ಲ ನೀರು ಖಾಲಿಯಾಗುತ್ತಿದೆ‘ ಎಂದರು.
’ಡಿಕೆಶಿ, ಸಿದ್ದರಾಮಯ್ಯ, ಖರ್ಗೆ ಅವರನ್ನು ಎಂ.ಬಿ. ಪಾಟೀಲ ಮುಗಿಸುತ್ತಾರೆ‘ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ಬಗ್ಗೆ ಮಾತನಾಡಿದ ಅವರು, ‘ಬಿ.ಎಸ್. ಯಡಿಯೂರಪ್ಪ ಅವರನ್ನು ಮುಗಿಸಲು ಶೋಭಾ ಕರಂದ್ಲಾಜೆನೇ ಸೇರಿಕೊಂಡು ಅವರ ಪಕ್ಷದಲ್ಲಿ ಏನೇನು ಮಾಡಿದರು ಎಂದು ಗೊತ್ತಿದೆ. ನಮ್ಮ ವಿಷಯಕ್ಕೆ ಬಂದರೆ, ಯಡಿಯೂರಪ್ಪ ಅವರನ್ನು ಮುಗಿಸಲು ಏನೇನು ಯೋಜನೆ ರೂಪಿಸಿದರು ಎನ್ನುವುದನ್ನು ಬಿಚ್ಚಿಡ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚಿತ್ತಾಪುರ ಕ್ಷೇತ್ರದ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಮತ್ತು ಅವರವಿಂದ ಚೌಹಾಣ್ ಅವರು ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರ್ಪಡೆಯಾದರು.