ಹೊಸದಿಲ್ಲಿ: ತಾವು ಕ್ರೀಡಾ ಸ್ಪರ್ಧೆಗಳಲ್ಲಿ ಹೋರಾಡಿ ಗೆದ್ದು ತಂದ ಪದಕಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಹೀಗಾಗಿ ಅವುಗಳನ್ನು ಹರಿದ್ವಾರದ ಗಂಗಾ ನದಿಯಲ್ಲಿ ವಿಸರ್ಜನೆ ಮಾಡುತ್ತೇವೆ ಎಂದು ಪ್ರತಿಭಟನಾನಿರತ ಕುಸ್ತಿಪಟುಗಳು ಹೇಳಿದ್ದಾರೆ. ತಮ್ಮ ಪದಕಗಳನ್ನು ವ್ಯವಸ್ಥೆಯು ತನ್ನ ಪ್ರಚಾರದ ‘ಮುಖವಾಡ’ದಂತೆ ಮಾತ್ರ ಬಳಸಿಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಅಪ್ರಾಪ್ತ ವಯಸ್ಕಳು ಸೇರಿದಂತೆ ಅನೇಕ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಕುಸ್ತಿಪಟುಗಳ ತಂಡ ಉತ್ತರಾಖಂಡದ ಹರಿದ್ವಾರದ ಕಡೆಗೆ ತೆರಳಿದ್ದು, ಮಂಗಳವಾರ ಸಂಜೆ 6 ಗಂಟೆಗೆ ಪದಕಗಳ ವಿಸರ್ಜನೆಗೆ ಉದ್ದೇಶಿಸಿದ್ದಾರೆ. ಅದರ ನಂತರ ದಿಲ್ಲಿಯ ಇಂಡಿಯಾ ಗೇಟ್ ಬಳಿ ಆಮರಣಾಂತ ಉಪವಾಸ ಮುಷ್ಕರ ನಡೆಸುವುದಾಗಿ ತಿಳಿಸಿದ್ದಾರೆ.
ಈ ಪದಕಗಳನ್ನು ಕಳೆದುಕೊಂಡ ಬಳಿಕ ತಮ್ಮ ಜೀವಗಳಿಗೂ ಯಾವುದೇ ಅರ್ಥವಿಲ್ಲ. ಆತ್ಮಗೌರವದ ಜತೆಗೆ ರಾಜಿಯಾಗುವುದನ್ನು ಮುಂದುವರಿಸಲು ತಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
“ನಮ್ಮ ಕುತ್ತಿಗೆ ಸುತ್ತ ಅಲಂಕೃತವಾಗಿದ್ದ ಈ ಪದಕಗಳಿಗೆ ಇನ್ನು ಯಾವ ಅರ್ಥವೂ ಇಲ್ಲ ಎನಿಸುತ್ತದೆ. ಅವುಗಳನ್ನು ಮರಳಿಸುವ ವಿಚಾರದ ಆಲೋಚನೆಯೇ ನನ್ನನ್ನು ಸಾಯಿಸುತ್ತಿದೆ. ಆದರೆ ನಿಮ್ಮ ಆತ್ಮ ಗೌರವದ ಜತೆ ರಾಜಿ ಮಾಡಿಕೊಂಡು ಬದುಕುವ ಜೀವನದ ಪ್ರಯೋಜನವೇನು?” ಎಂದು ಏಪ್ರಿಲ್ನಿಂದ ಪ್ರತಿಭಟನೆ ನಡೆಸುತ್ತಿರುವ ಪ್ರಮುಖ ಅಥ್ಲೀಟ್ಗಳು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ ಹೇಳಲಾಗಿದೆ.
ರಾಷ್ಟ್ರಪತಿಯೂ ಇಲ್ಲ, ಮೋದಿಯೂ ಕೇಳಿಲ್ಲ
ತಮ್ಮ ನೋವನ್ನು ಆಲಿಸದ ಸರ್ಕಾರಕ್ಕೆ ‘ಪದಕ ವಾಪ್ಸಿ’ ನಡೆಸುವುದಾಗಿ ಈ ಹಿಂದೆ ಕುಸ್ತಿಪಟುಗಳು ಹೇಳಿದ್ದರು. ಆದರೆ ಯಾರಿಗೆ ಅವುಗಳನ್ನು ವಾಪಸ್ ನೀಡುವುದು ಎನ್ನುವುದೇ ಗೊಂದಲಕರ ಎಂದಿದ್ದಾರೆ. “ಸ್ವತಃ ಮಹಿಳೆಯಾಗಿರುವ ರಾಷ್ಟ್ರಪತಿ, ಕೇವಲ ಎರಡು ಕಿಮೀ ದೂರದಲ್ಲಿ ಕುಳಿತು ನೋಡಿದ್ದಾರೆ. ಅವರು ಏನನ್ನೂ ಹೇಳಲಿಲ್ಲ” ಎಂದು ಪದಕಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮರಳಿಸಲು ಏಕೆ ಮುಂದಾಗಿಲ್ಲ ಎಂಬುದನ್ನು ವಿವರಿಸಿದ್ದಾರೆ.
ತಮ್ಮ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಒಮ್ಮೆ ಕೂಡ ವಿಚಾರಿಸಿಲ್ಲ ಎಂದೂ ಆರೋಪಿಸಿದ್ದಾರೆ. “ಬದಲಾಗಿ, ನಮ್ಮ ಶೋಷಕ (ಬ್ರಿಜ್ ಭೂಷಣ್) ಹೊಳೆಯುವ ಬಿಳಿ ಬಟ್ಟೆಗಳನ್ನು ಧರಿಸಿ, ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾ ಹೊಸ ಸಂಸತ್ ಕಟ್ಟಡದ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು. ಆ ಬಿಳಿ ಉಡುಪುಗಳು, ‘ನಾನೇ ವ್ಯವಸ್ಥೆ’ ಎಂದು ಹೇಳುವಂತೆ ನಮ್ಮನ್ನು ಕುಟುಕುತ್ತಿದ್ದವು” ಎಂದು ನೋವು ಹಂಚಿಕೊಂಡಿದ್ದಾರೆ. ಸಾಕ್ಷಿ ಮಲಿಕ್, ವಿನೇಶ್ ಪೋಗಟ್, ಬಜರಂಗ್ ಪೂನಿಯಾ ಮುಂತಾದ ಕುಸ್ತಿಪಟುಗಳು ಈ ಪತ್ರವನ್ನು ಹಂಚಿಕೊಂಡಿದ್ದಾರೆ.
“ಈ ವ್ಯವಸ್ಥೆಯು ಪದಕಗಳನ್ನು ನಮ್ಮ ಕುತ್ತಿಗೆ ಸುತ್ತಲೂ ಹಾಕಿ, ನಮಗೆ ಮುಖವಾಡ ತೊಡಗಿಸುವ ಮೂಲಕ ತನ್ನದೇ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಹೀಗಾಗಿ ಈ ಪದಕಗಳು ನಮಗೆ ಬೇಡ. ಅವರು ಆಗ ನಮ್ಮನ್ನು ಶೋಷಣೆ ಮಾಡಿದರು. ಈಗ ನಾವು ಪ್ರತಿಭಟನೆ ನಡೆಸಿದರೆ ಜೈಲಿಗೆ ಹಾಕಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಗೆಯಂತೆ ನಾವೂ ಪವಿತ್ರರು
“ಗಂಗಾ ನದಿ ನಮ್ಮ ಮಾತೆಯಾಗಿರುವುದರಿಂದ ಅದನ್ನು ಆಯ್ಕೆ ಮಾಡಿದ್ದೇವೆ. ಗಂಗೆಯಂತೆ ನಾವು ಪವಿತ್ರರು. ಈ ಪದಕಗಳನ್ನು ಗೆಲ್ಲಲು ಪರಿಶುದ್ಧತೆಯಂತೆ ಕಠಿಣ ಪರಿಶ್ರಮ ಹಾಕಿದ್ದೇವೆ. ಪದಕಗಳು ಇಡೀ ದೇಶಕ್ಕೆ ಪವಿತ್ರವಾಗಿವೆ. ಅವುಗಳಿಗೆ ಈ ಪವಿತ್ರ ನದಿಯೇ ಸೂಕ್ತ ಸ್ಥಳ” ಎಂದಿದ್ದಾರೆ.
“ಪೊಲೀಸರು ಮತ್ತು ವ್ಯವಸ್ಥೆಯು ನಮ್ಮನ್ನು ಕ್ರಿಮಿನಲ್ಗಳಂತೆ ನಡೆಸಿಕೊಳ್ಳುತ್ತಿದ್ದರೆ, ಕಿರುಕುಳ ನೀಡಿದಾತ ಸಾರ್ವಜನಿಕ ಸಭೆಗಳಲ್ಲಿ ನಮ್ಮ ಮೇಲೆ ಬಹಿರಂಗವಾಗಿ ದಾಳಿ ನಡೆಸುತ್ತಿದ್ದಾರೆ. ಮಹಿಳಾ ಕುಸ್ತಿಪಟುಗಳಿಗೆ ಈ ದೇಶದಲ್ಲಿ ನಮಗೆ ಏನೂ ಉಳಿದಿಲ್ಲ ಎಂದೆನಿಸತೊಡಗಿದೆ. ನಾವು ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಶಿಪ್ಗಳಲ್ಲಿ ಗೆದ್ದಾಗಿನ ಗಳಿಗೆಗಳನ್ನು ನೆನಪಿಸಿಕೊಳ್ಳುತ್ತಿದ್ದೇವೆ” ಎಂದು ಹೇಳಿದ್ದಾರೆ.