ಮೈಸೂರು: ಕೆ.ಆರ್.ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ , ಹಾಲಿಶಾಸಕ ಸಾ.ರಾ.ಮಹೇಶ್ ಇಂದು ಮಿನಿವಿಧಾನಸೌಧ ತಾಲೂಕು ಕಛೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು.
ರೇಷ್ಮೆಶಲ್ಯ, ರೇಷ್ಮೆ ಪಂಚೆ, ರೇಷ್ಮೆ ಶರ್ಟ್ ಧರಿಸಿದ್ದ ಸಾ.ರಾ.ಮಹೇಶ್ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರಲ್ಲದೇ, ತಾಯಿಯ ಬಳಿ ನಾಮಪತ್ರ ಇರಿಸಿ ಪೂಜೆ ಮಾಡಿಸಿದರು. ಬಳಿಕ ಕೆ.ಆರ್.ನಗರದ ತೋಪಮ್ಮ ದೇವಸ್ಥಾನದಿಂದ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಸಾಗಿ ಮಿನಿವಿಧಾನಸೌಧದ ತಾಲೂಕು ಕಛೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ಉಮೇದುವಾರಿಕೆ ಸಲ್ಲಿಸಿದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್.ಶ್ರೀವತ್ಸ ಅವರು ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಅಪಾರ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಹೊರಟು ಪಾಲಿಕೆಯ ಕಛೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಮೇಶ್ ಅವರು ಶಾಂತಲಾ ಚಿತ್ರಮಂದಿರದ ಸಮೀಪದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಯ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಅಪಾರ ಬೆಂಬಲಿಗರೊಂದಿಗೆ ಪಾದಯಾತ್ರೆಯ ಮೂಲಕ ಸಾಗಿ ಮೈಸೂರು ಮಹಾ ನಗರಪಾಲಿಕೆಯಲ್ಲಿರುವ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಖಾದರ್ ಶಾಹಿದ್ ಅವರು ಕೂಡ ಅಪಾರ ಬೆಂಬಲಿಗರೊಂದಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.