ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ನಾಲ್ಕೈದು ದಿನಗಳ ಬಳಿಕ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಆಯ್ಕೆಯಾಗಿದ್ದಾರೆ. ಇದೀಗ ಇಬ್ಬರು ನಾಯಕರು ಬೆಂಗಳೂರಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ಇಂದು ಸಂಜೆ 7 ಗಂಟೆ ಸುಮಾರಿಗೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಅಭೂತಪೂರ್ವವಾಗಿ ಸ್ವಾಗತಿಸಲಾಯಿತು. ಬಳಿಕ ಕಾರಿನಲ್ಲಿ ಮೆರವಣಿಗೆ ಮೂಲಕ ಸಿದ್ದರಾಮಯ್ಯ ಅವರು ನೇರವಾಗಿ ತಮ್ಮ ಕುಮಾರಕೃಪಾ ನಿವಾಸಕ್ಕೆ ತೆರಳಿದರು. ಈ ವೇಳೆ ದಾರಿಯುದ್ದಕ್ಕೂ ಅಭಿಮಾನಿಗಳು ಹೂಮಳೆ ಸುರಿದರು.

ಕುಮಾರಕೃಪಾದಿಂದ ನೇರವಾಗಿ ಕೆಪಿಸಿಸಿ ಕಚೇರಿಗೆ ತೆರಳಲಿರುವ ಸಿದ್ದರಾಮಯ್ಯ ನಂತರ ಇಂದಿರಾ ಭವನದಲ್ಲಿ ನಡೆಯುವ ಸಿಎಲ್ಪಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇತ್ತ ಸಿದ್ದರಾಮಯ್ಯ ನಿವಾಸದಲ್ಲಿ ಅದಾಗಲೇ ಆಗಮಿಸಿರುವ ಅಭಿಮಾನಿಗಳು ಜೈಕಾರ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಪರ ಘೋಷಣೆ ನಿವಾಸದ ಮುಂದೆ ಮುಗಿಲುಮುಟ್ಟಿದೆ.
ಹೇಗೆ ನಡೆಯಲಿದೆ ಶಾಸಕಾಂಗ ಸಭೆ?: ಕಾಂಗ್ರೆಸ್ ಶಾಸಕಾಂಗ ಸಭೆ (ಅಐP ಒeeಣiಟಿg) ಯಲ್ಲಿ ಕೆಲವು ನಿರ್ಣಯಗಳು ನಡೆಯಲಿದೆ. ಬಹುಮತ ಪಡೆದ ಬಳಿಕ ನಡೆಯುತ್ತಿರುವ ಎರಡನೇ ಶಾಸಕಾಂಗ ಸಭೆ ಇದಾಗಿದ್ದು, ಶಾಸಕಾಂಗ ಸಭೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ವೀಕ್ಷಕರು ಹಾಜರಾಗಲಿದ್ದಾರೆ. ರಾಜ್ಯ ಉಸ್ತುವಾರಿಯಿಂದ ಎಐಸಿಸಿಯಲ್ಲಿ ನಡೆದ ನಿರ್ಣಯದ ಪ್ರಸ್ತಾಪ ಆಗಲಿದೆ. ಎಐಸಿಸಿ ಅಧ್ಯಕ್ಷರು ಸಿಎಂ ಹಾಗೂ ಡಿಸಿಎಂ ಆಗಿ ಆಯ್ಕೆ ಮಾಡಿರುವ ವಿಚಾರ ಪ್ರಸ್ತಾಪಿಸಲಾಗುತ್ತದೆ. ಮೊದಲ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರ ನಿರ್ಣಯಕ್ಕೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಗಿತ್ತು.
ಎಐಸಿಸಿ ನಿರ್ಣಯಕ್ಕೆ ಇಂದಿನ ಶಾಸಕಾಂಗ ಸಭೆಯಲ್ಲಿ ಎಲ್ಲ ಶಾಸಕರ ಅನುಮೋದನೆ ನೀಡಲಾಗುತ್ತದೆ. ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಲು ಶಾಸಕಾಂಗ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. ಹಕ್ಕು ಮಂಡನೆ ನಿರ್ಣಯಕ್ಕೆ ಎಲ್ಲ ಶಾಸಕರು ಲಿಖಿತ ಸಹಿ ಹಾಕುತ್ತಾರೆ. ಲಿಖಿತ ರೂಪದಲ್ಲಿ ನೂತನ ಸಿಎಲ್ಪಿ ನಾಯಕನ ಆಯ್ಕೆ ಪತ್ರ ಸಿದ್ದಪಡಿಸಲಾಗುತ್ತದೆ. ಸಿಎಲ್ಪಿ ನಿರ್ಣಯದೊಂದಿಗೆ ಹೋಗಿ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ನೇತೃತ್ವದಲ್ಲಿ ರಾಜ್ಯಪಾಲರ ಭೇಟಿಯಾಗಲಿದ್ದಾರೆ. ರಾಜ್ಯಪಾಲರ ಮುಂದೆ ಸರ್ಕಾರ ರಚನೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಅವಕಾಶ ನೀಡುವಂತೆ ಮನವಿ ನೀಡಲಾಗುತ್ತದೆ.