ಹಲಗೂರು:ಪಟಾಕಿಯಲ್ಲಿದ್ದ ಮದ್ದಿನ ಚೂರುಗಳನ್ನು ತಿಂದು ಮೂರು ವರ್ಷದ ಬಾಲಕ ಮೃತಪಟ್ಟ ಘಟನೆ ಸಮೀಪದ ಧನಗೂರು ಹೊರವಲಯದ ತೋಟದ ಮನೆಯೊಂದರಲ್ಲಿ ನಡೆದಿದೆ.
ನೇಪಾಳ ಮೂಲದ ಕಮಲ್ ನಾಥ್ ಮತ್ತು ಮೀನಾದೇವಿ ದಂಪತಿಗಳು ಉದ್ಯೋಗ ಹರಸಿ ಮೂರು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು. ಒಂದು ವರ್ಷದ ಹಿಂದೆ ಹಲಗೂರು ಸಮೀಪದ ಧನಗೂರು ಗ್ರಾಮದ ಅಯೂಬ್ ಪಾಷಾ ರವರಿಗೆ ಸೇರಿದ ತೋಟದಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಮೇ.16 ರಂದು ತೋಟಕ್ಕೆ ಬಂದಿದ್ದ ಮಂಗಗಳನ್ನು ಬೆದರಿಸಿ ಹೊರಹಾಕಲು ಕಮಲ್ ನಾಥ್ ಪಟಾಕಿ ಸಿಡಿಸಿದ್ದರು. ಈ ಪಟಾಕಿಯಲ್ಲಿದ್ದ ಮದ್ದು ಮಿಶ್ರಿತ ಕಾಗದದ ತುಣುಕುಗಳನ್ನು ಕಮಲ್ ನಾಥ್ ಪುತ್ರ ಸರೋಜ್ ನಾಥ್ (3) ತಿಂದು ಅಶ್ವಸ್ಥನಾಗಿದ್ದನು. ತಕ್ಷಣ ಜಾಗೃತರಾದ ದಂಪತಿಗಳು ಚಿಕಿತ್ತೆಗಾಗಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೇ 17 ರಂದು ಮಂಗಳವಾರ ಮಗು ಮೃತಪಟ್ಟಿದೆ.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.