ಮೈಸೂರು: ಭಾರತದಲ್ಲಿ ಮಹಿಳೆಯರ ಆರೋಗ್ಯದ ಮೇಲೆ ಸ್ತನ ಕ್ಯಾನ್ಸರ್ ಕರಿನೆರಳು ಬೀರಿದೆ. ಪ್ರತಿ 28 ಭಾರತೀಯ ಮಹಿಳೆಯರಲ್ಲಿ ಸರಿಸುಮಾರು ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಎಂಬುದು ಗಂಭೀರ ಅಂಕಿ ಅಂಶವಾಗಿದೆ ಎಂದು ಡಾ. ಸುಷ್ಮಾ ಕೃಷ್ಣಮೂರ್ತಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಕ್ಟೋಬರ್ ಮಾಸವನ್ನು ಸ್ತನ ಕ್ಯಾನ್ಸರ್ ಜಾಗೃತಿ ಮಾಸವಾಗಿ ಆಚರಿಸಲಾಗುತ್ತಿದೆ. ಈ ವರ್ಷ ಥೀಮ್ ‘ಅವಳನ್ನು ಚಿತ್ರದಲ್ಲಿ ಇರಿಸಿ’ ಅಂದರೆ ಪ್ರತಿಯೊಬ್ಬರು ಯೋಗಕ್ಷೇಮದ ಮೇಲೆ ನಿಗಾ ಇಡಲು ಮನವಿ ಎಂಬುದಾಗಿದೆ. ಎಲ್ಲರ ಜೀವನದಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಕೆಲವು ಮಹಿಳೆಯರು ಆನುವಂಶಿಕವಾಗಿ ಅಪಾಯವನ್ನು ಹೊಂದಿರುತ್ತಾರೆ. ಇದರಿಂದ ಅನೇಕ ಆತಂಕಕಾರಿ ಸಂಗತಿಗಳನ್ನು ಅವರು ಎದುರಿಸಬೇಕಾಗಿದೆ. ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳದಿದ್ದರೆ ಸ್ಥೂಲಕಾಯತೆ, ದೈಹಿಕ ನಿಷ್ಕ್ರಿಯತೆ ಮತ್ತು ಆಲ್ಕೋಹಾಲ್ ಸೇವನೆ ಅಭ್ಯಾಸ ಇದ್ದರೆ ಬದುಕು ಇಂಚಿಚು ನಾಶವಾಗುತ್ತಾ ಬರುತ್ತದೆ. ಕೆಲವೊಮ್ಮೆ ರಾಸಾಯನಿಕ, ಕೀಟನಾಶಕಗಳನ್ನು ಬಳಸುವುದರಿಂದ, ವಿಕಿರಣಗಳ ಅವಲಂಬನೆಯಿಂದ ಪ್ರಕೃತಿಯು ಹಾಳಾಗುತ್ತದೆ. ಇದು ನಮ್ಮ ಆರೋಗ್ಯದ ಮೇಲೂ ನೇರ ಪರಿಣಾಮ ಬೀರುತ್ತದೆ ಎಂದರು.
ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳ ಅಂಗವಾಗಿ ನಮ್ಮ ಆಸ್ಪತ್ರೆಯಲ್ಲಿ ಅಕ್ಟೋಬರ್ 9 ರಿಂದ 14 ರವರೆಗೆ ಹಾಗೂ 25ರಿಂದ 31 ರವರೆಗೆ ಉಚಿತ ಸಮಾಲೋಚನೆ ಮತ್ತು ಮಮೊಗ್ರಫಿಗೆ ಶೇಕಡಾ 50 ರಷ್ಟು ರಿಯಾಯಿತಿ ಸಂಜೆ 5 ರಿಂದ 7 ರವರೆಗೆ ಇರುತ್ತದೆ. ಜೊತೆಗೆ ಕಾಂಗರೂ ಕೇರ್ ಆಸ್ಪತ್ರೆಯ ವಿವಿಧ ಸೌಲಭ್ಯಗಳು ಮತ್ತು ವಿಶಿಷ್ಟತೆಯ ಬಗ್ಗೆ ವಿವರಿಸಿದರು.