ಮೈಸೂರು:- ಮನುಷ್ಯ ಸಂಬಂಧಗಳಲ್ಲಿ ಅತ್ಯಂತ ಭಾವುಕ ಹಾಗೂ ಪ್ರೀತಿಯ ಸಂಬಂಧ ತಾಯಿ. ಅಂತಹ ತಾಯಿಯನ್ನು ದೇವರೆಂದು ನಂಬಿರು ಮೈಸೂರಿನ ಕೃಷ್ಣಕುಮಾರ್ ರವರು ತಮ್ಮ ತಾಯಿಯೊಂದಿಗೆ ಬರೇಲಿ, ಹಲ್ದವಾನಿ, ರಾಣೀಖೇತ್, ಕೇಚಿಧಾಮ್ ಕರ್ಣ ಪ್ರಯಾಗ ಮುಖಾಂತರ ಬದರಿನಾಥ ತಲುಪಿದರು.
ಒಂದೇ ದಿನ ಕರ್ಣ ಪ್ರಯಾಗದಿಂದ ನೇರವಾಗಿ ಸತತ 10 ಗಂಟೆಗಳ ಸ್ಕೂಟರ್ ಪ್ರಯಾಣ ಮಾಡಿ ಬದರಿನಾಥ ಕ್ಷೇತ್ರವನ್ನು ತಲುಪಿದ್ದಾರೆ.
ಹೇಳಿ ಕೇಳಿ ಬದರಿನಾಥ ಹಿಮಾಲಯದ ತಾಣ, ಅಲ್ಲಿನ ರಮ್ಯ ಮನೋಹರವಾದ ಪ್ರಕೃತಿ ಸೌಂದರ್ಯ, ಹಿಮ ಕಂದರಗಳು, ಆಳ ಕಣಿವೆಗಳು ಹಿಮಾಚ್ಛಾದಿತ ವಾತಾವರಣ ಕಣ್ಮನ ಸೆಳೆಯುತ್ತವೆ.
ಆದರೆ ಅದೇ ಸಮಯದಲ್ಲಿ ಮೈನಸ್ ಡಿಗ್ರಿಯ ಕೊರೆಯುವ ಚಳಿ ಸ್ಥಳೀಯರನ್ನು ಹೊರತುಪಡಿಸಿ ಇತರೆ ಎಲ್ಲ ಪ್ರವಾಸಿಗರಿಗೂ ಬಹುದೊಡ್ಡ ಸವಾಲಾಗುತ್ತದೆ. ಸ್ಥಳೀಯರು ಹಾಗೂ ಬದರಿನಾಥ ದೇವಾಲಯದ ಸಿಬ್ಬಂದಿಗಳ ಸಹಕಾರದೊಂದಿಗೆ ತಾಯಿ ಮಗ ಇಬ್ಬರೂ ಬದರಿನಾಥನ ದರ್ಶನ ಮಾಡಿ ಹರ್ಷ ಚಿತ್ತರಾದರು.
ಸುತ್ತಮುತ್ತಲಿನ ಎತ್ತರವಾದ ಹಿಮಬೆಟ್ಟಗಳನ್ನು ನೋಡಿ ಆನಂದಿಸಿದರು. ನಂತರ ಅಲ್ಲಿನ ಸ್ಥಳೀಯರ ಜತೆಗೆ ತಮ್ಮ ಯಾತ್ರೆಯ ಅನುಭವವನ್ನು ಹಂಚಿಕೊಂಡರು. ಇಚ್ಛಾಶಕ್ತಿ ಮತ್ತು ನಿರಂತರ ಪ್ರಯತ್ನದ ಫಲವಾಗಿ ಇಂಥ ಪವಾಡಗಳು, ಸಾಹಸಗಳು ಜರುಗುತ್ತದೆ ಎಂದು ಮುಕ್ತ ಕಂಠದಿಂದ ಸ್ಥಳೀಯರು ಪ್ರಶಂಸಿಸಿದರು.
ನಂತರ ದೇವಾಲಯದ ಅಧಿಕಾರಿಗಳು ಹೃತ್ಪೂರ್ವಕ ಅಭಿನಂದನೆಯೊಂದಿಗೆ ತಾಯಿ ಮತ್ತು ಮಗ ನನ್ನು ಅಭಿನಂದಿಸಿ ಬೀಳ್ಕೊಟ್ಟರು. ಇಲ್ಲಿಯವರೆಗೆ ಇವರಿಬ್ಬರೂ 70,003 ಕಿಲೋ ಮೀಟರ್ಗಳ ಪ್ರಯಾಣವನ್ನು ಪೂರೈಸಿದ್ದಾರೆ. ನಂತರ ಶ್ರೀ ಶಂಕರಾಚಾರ್ಯರಿಂದ ಸ್ಥಾಪಿತವಾದ ಜ್ಯೋತಿರ್ಮಠವನ್ನು ತಲುಪಿ ಅಲ್ಲಿನ ಶ್ರೀಗಳಿಂದ ಆಶೀರ್ವಾದವನ್ನು ಪಡೆಯಲಿದ್ದಾರೆ.