ದಾವಣಗೆರೆ: ಹುಲಿಗುಡ್ಡದ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿಯೊಬ್ಬಳು ಚಲಿಸುತ್ತಿದ್ದ ಬಸ್ ನಿಂದ ಬಿದ್ದು, ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಶ್ವೇತಾ ಶಾಂತಪ್ಪನವರ್ ಎಂದು ಗುರ್ತಿಸಲಾಗಿದೆ. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದ ನಿವಾಸಿಯಾಗಿರುವ ವಿದ್ಯಾರ್ಥಿನಿ, ಹಾಸ್ಟೆಲ್ನಲ್ಲಿ ಉಳಿದುಕೊಂಡು ಕೆಎಸ್ಆರ್ಟಿಸಿ ಬಸ್ಗಳಲ್ಲಿ ನಿತ್ಯ ಕಾಲೇಜಿಗೆ ಪ್ರಯಾಣಿಸುತ್ತಿದ್ದಳು.
ಬುಧವಾರ ಕಾಲೇಜಿಗೆ ಹೋಗಲು ರಾಣೆಬೆನ್ನೂರು ಘಟಕದ ಬಸ್ಸಿನಲ್ಲಿ ಸಂಚರಿಸುತ್ತಿದ್ದಳು. ಕಾಲೇಜು ಹತ್ತಿರ ನಿಲುಗಡೆ ಇಲ್ಲದಿದ್ದರೂ ಇಳಿಯಲು ಯತ್ನಿಸಿದ ಕಾರಣ ಆಯತಪ್ಪಿ ಬಿದ್ದು ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ.
ಕಾಲೇಜಿಗೆ ಹೋಗಲು ಸಮಯವಾಗುತ್ತದೆ ಎಂದು ಬೇಗ ಹೋಗಬೇಕೆಂದು ಚಲಿಸುತ್ತಿದ್ದ ಬಸ್ಸಿನಿಂದ ಇಳಿಯಲು ಹೋಗಿದ್ದಳು ಎಂದು ಸಹ ವಿದ್ಯಾರ್ಥಿಗಳು ಹೇಳಿದ್ದಾರೆ.
ಈ ನಡುವೆ ವಿದ್ಯಾರ್ಥಿನಿ ಸಾವಿಗೆ ಬಸ್ಸಿನ ಸಿಬ್ಬಂದಿಯೇ ಕಾರಣ ಎಂದು ಆರೋಪಿಸಿರವ ವಿದ್ಯಾರ್ಥಿಗಳು ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಬಳಿಕ ಸ್ಥಳಕ್ಕೆ ಬಂದ ತಹಶೀಲ್ದಾರ್ ಕೆ.ಶರಣಮ್ಮ ಅವರು, ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ಈ ಕುರಿತು ಹಡಗಲಿ ಪೊಲೀಸ್ ಠಾಣೆಗೆ ಎಫ್ಐಆರ್ ದಾಖಲಾಗಿದೆ. ಹಾವೇರಿ ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ಮಾತನಾಡಿ, ಬಸ್ ಚಾಲಕ ಹಾಗೂ ಕಂಡಕ್ಟರ್ ವಿರುದ್ಧ ಶನಿವಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.