ಮೈಸೂರು: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಮೇಲೆ ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆತಂಕಪಟ್ಟಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಜಾಸ್ತಿಯಾಗಿ, ನಮ್ಮ ಕಾರ್ಯಕರ್ತರನ್ನ ಟಾರ್ಗೆಟ್ ಮಾಡುತ್ತಿದ್ದಾರೆ, ಇದರಿಂದ ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನ ಅಪಾಯಕ್ಕೆ ಸಿಲುಕಿಸಿದ್ದಕ್ಕಾಗಿ ನಾವು ಕ್ಷಮೆ ಕೇಳುತ್ತೇವೆ. ಮುಂದಿನ ದಿನಗಳಲ್ಲಿ ಉತ್ತಮ ರಾಜಕಾರಣ ಮಾಡೋಣ ಎಂದು ಹೇಳಿದ್ದಾರೆ.
ಬಿಜೆಪಿ ಕೇಂದ್ರ ಸರ್ಕಾರದಲ್ಲಿ ಉತ್ತಮ ಕೆಲಸಗಳನ್ನ ಮಾಡಿದೆ. ರಾಜ್ಯದಲ್ಲಿಯೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಉತ್ತಮ ಸೇವೆ ಮಾಡಿತ್ತು. ಆದ್ರೆ ನಾವು ಅವುಗಳನ್ನ ಜನರಿಗೆ ತಿಳಿಸುವಲ್ಲಿ ವಿಫಲರಾಗಿದ್ದೇವೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೋಡಿದ ಕೂಡಲೇ ಜನರು ಗ್ಯಾರಂಟಿ ಕೊಟ್ಟೇ ಬಿಟ್ರು ಅಂತಾ ವೋಟ್ ಹಾಕಿದ್ದಾರೆ. ನಾನು ಗ್ಯಾರಂಟಿಗಳ ಪರ ಇದ್ದೇನೆ. ಆದ್ರೆ ಅರ್ಥವ್ಯವಸ್ಥೆಗೆ ಹೊಡೆತ ಬೀಳದಂತೆ ನೋಡಿಕೊಳ್ಳಬೇಕು ಅಷ್ಟೇ ಎಂದು ಮನವಿ ಮಾಡಿದ್ದಾರೆ.
ಈ ಬಾರಿ ಕಾಂಗ್ರೆಸ್ ಗೆದ್ದಿದೆ ಅಂದ ಮಾತ್ರಕ್ಕೆ ಎಲ್ಲವೂ ಮುಗಿದು ಹೋಯಿತು, ಇದೇ ಶಾಶ್ವತ ಎಂದಲ್ಲ. ಪ್ರತೀ ಚುನಾವಣೆಯಲ್ಲೂ ಫಲಿತಾಂಶ ಬದಲಾಗುತ್ತೆ. ಮೀಸಲಾತಿ ನೀಡಿ ಒಳ್ಳೆ ಕೆಲಸ ಮಾಡಿದ್ದರೂ ನಾವು ಮನವರಿಕೆ ಮಾಡಿಕೊಡುವಲ್ಲಿ ವಿಫಲರಾದ್ವಿ. ನಾವು ಉಚಿತ ಬಸ್ ಪಾಸ್ ಸೇವೆ ಮಾಡಿದ್ವಿ, ಪ್ರಧಾನ ಮಂತ್ರಿ ಅನ್ನ ಕಲ್ಯಾಣ ಯೋಜನೆ ಮಾಡಿದ್ವಿ, ಅವುಗಳನ್ನ ಜಾರಿ ಮಾಡಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ.
ನಾನು ನಮ್ಮ ಕಾರ್ಯಕರ್ತರಿಗೆ ಅಂತರಾಳದಿಂದ ಕೇಳುತ್ತೇನೆ. ಏಕೆಂದರೆ ಚುನಾವಣೆಯಲ್ಲಿ ನಮ್ಮ ಪರವಾಗಿ ಓಡಾಡಿಕೊಂಡು ಕೆಲಸ ಮಾಡೋರು ಅವರು, ಸೋತ ಅಭ್ಯರ್ಥಿ ಇನ್ನು 5 ವರ್ಷ ಬೇರೆ ವ್ಯವಹಾರ ಮಾಡಿಕೊಂಡಿರ್ತಾರೆ. ಆದ್ರೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿಲ್ಲ ಅಂತಾ ನಿಜವಾಗಿಯೂ ನೋವಾಗಿರೋದು ನಮ್ಮ ಕಾರ್ಯಕರ್ತರಿಗೆ. ಜೊತೆಗೆ ಮಂಗಳೂರು, ಕೊಡಗು ಭಾಗಗಳಲ್ಲಿ ಘರ್ಷಣೆಗಳಾಗುತ್ತಿದ್ದು, ನಮ್ಮ ಕಾರ್ತಕರ್ತರನ್ನ ಅಪಾಯಕ್ಕೆ ಸಿಲುಕಿಸಿದ್ದೇವೆ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ ಭಾವುಕರಾದರು.