ಬೆಂಗಳೂರು:- ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಖಾಲಿ ಡಬ್ಬದಂತಿದೆ. ಅಧಿಕಾರ ಇದ್ದಾಗ ಅವರು ಏನು ಮಾಡಲಿಲ್ಲ. ಕಳೆದ ಚುನಾವಣೆಯಲ್ಲಿ ನಿಮ್ಮ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರೂ ಆಗಲಿಲ್ಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎಲ್ಲಾ ವರ್ಗದವರಿಗೆ ನ್ಯಾಯ ಒದಗಿಸಿಕೊಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೇ 10ರ ದಿನ ಕೇವಲ ಮತದಾನದ ದಿನ ಮಾತ್ರವಲ್ಲ, ಭ್ರಷ್ಟಾಚಾರವನ್ನು ರಾಜ್ಯದಿಂದ ಬಡಿದೋಡಿಸುವ ದಿನ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಜಾರಿ ಮಾಡುವ ದಿನವಾಗಿದೆ ಎಂದರು.
ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ವೇಳೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಎಲ್ಲ ಕಡೆ ಬೋಗಸ್ ಕೆಲಸ ಮಾಡಿ, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಬಾವುಟ ಹಾಕುವಂತೆ ಒತ್ತಡ ಹಾಕುತ್ತಿದ್ದಾರೆ. ಈ ಸರ್ಕಾರ 15 ದಿನಗಳ ನಂತರ ಈ ಸರ್ಕಾರ ಅದಿಕಾರದಲ್ಲಿ ಇರುವುದಿಲ್ಲ, ನಮ್ಮ ಪಕ್ಷದ ಕಾರ್ಯಕರ್ತರಿಗೆ ತೊಂದರೆ ನೀಡುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ನಮ್ಮ ಸರ್ಕಾರ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಜೆಪಿ ಆಡಳಿತ ಸಾಧನೆ ಶೂನ್ಯ. ರಾಜ್ಯದಲ್ಲಿ 40% ಕಮಿಷನ್ ಸರ್ಕಾರವಾಗಿದೆ. ಈ ಸರ್ಕಾರಕ್ಕೆ ಈ ಹೆಸರು ಕೊಟ್ಟಿದ್ದು ನಾನಲ್ಲ. ಈ ಸರ್ಕಾರದಲ್ಲಿ ಒಬ್ಬ ಸಚಿವ ಲಂಚಕ್ಕೆ ಹೋದರೆ, ಮತ್ತೊಬ್ಬ ಸಚಿವ ಮಂಚಕ್ಕೆ ಹೋದ. ಈಗ ಅವರೇ ಅವರ ಮುತ್ತುರತ್ನಗಳು. ಈ 40% ಕಮಿಷನ್ ಸರ್ಕಾರ ಕಿತ್ತೊಗೆಯಬೇಕು ಎಂದು ಕರೆಕೊಟ್ಟರು.
ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ಕಣ್ಣೀರು ಹಾಕಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಬಿಜೆಪಿ ಕಟ್ಟಿ ಬೆಳೆಸಿದ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರಿದ್ದಾರೆ. ನಿಮ್ಮ ಶಿಕ್ಷಕರ ಕ್ಷೇತ್ರದ ಪರಿಷತ್ ಸದಸ್ಯರಾದ ಪುಟ್ಟಣ್ಣ ಅವರು ನಾಲ್ಕು ವರ್ಷ ಅಧಿಕಾರವಿದ್ದರೂ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಲಕ್ಷ್ಮಣ್ ಸವದಿ ಅವರು ಐದು ವರ್ಷ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ ನಿಂದ ಅರಸಿಕೆರೆ ಶಿವಲಿಂಗೇಗೌಡರು, ಕೋಲಾರ ಶ್ರೀನಿವಾಸ್ ಗೌಡ, ಮಧು ಬಂಗಾರಪ್ಪ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಸೇರಿದ್ದಾರೆ ಎಂದರು.
ಬಿಜೆಪಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರೇ ಹೇಳುತ್ತಿದ್ದಾರೆ. ನಿನ್ನೆ ಟಿವಿ ಸಂದರ್ಶನದಲ್ಲಿ ಸ್ವತಃ ಅಮಿತ್ ಶಾ ಅವರೇ ಹೇಳಿದ್ದಾರೆ, ರಾಹುಲ್ ಗಾಂಧಿ ಅವರು ಆಶೀರ್ವಾದ ಮಾಡಿದ್ದು, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದಾರೆ. ನನ್ನನ್ನು ಅವರು ಮುಖ್ಯಮಂತ್ರಿ ಮಾಡುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.