ಮೈಸೂರು: ದೇಸಿಯ ಬೀಜ ವೈವಿಧ್ಯದ ಮಹತ್ವದ ಬಗ್ಗೆ ರೈತರು ಮತ್ತು ಗ್ರಾಹಕರಿಗೆ ಅರಿವು ಮೂಡಿಸುವ ಬೀಜ ಉತ್ಸವ ಹಾಗೂ ಆಹಾರ ಮೇಳಕ್ಕೆ ಶನಿವಾರ ವೈಭವದ ಚಾಲನೆ ದೊರೆಯಿತು.
ಸಹಜ ಸಮೃದ್ಧ ಸಂಸ್ಥೆ, ಸಹಜ ಸೀಡ್ನನ ಸಹಯೋಗದಲ್ಲಿ ನಗರದ ನಂಜರಾಜೇ ಬಹದ್ದೂರು ಛತ್ರದಲ್ಲಿ ಎರಡು ದಿನಗಳ ಆಯೋಜಿಸಿದ್ದ ಬೀಜ ಉತ್ಸವ ಮತ್ತು ಆಹಾರ ಮೇಳಕ್ಕೆ ಸಂಭ್ರಮದ ಚಾಲನೆ ದೊರೆಯಿತು. ಮೇಳದಲ್ಲಿ ರಾಜಮುಡಿ, ರಾಜಭೋಗ, ರತ್ನಚೂಡಿ, ಪುಟ್ಟಭತ್ತ, ಮುಂಡುಗ, ಆನಕೊಂಬಿನ ಭತ್ತದಂತ ಸೇರಿದಂತೆ ಅಪರೂಪದ ಭತ್ತಗಳ ಸಂಗ್ರಹ ಕಂಡು ಬಂದವು. ನಾಗಮಂಗಲದ ಈರುಳ್ಳಿ, ಮಳವಳ್ಳಿಯ ಕೊತ್ತಿ ತಲೆ ಮರ ಬದನೆ, ಮೈಸೂರಿನ ಈರಂಗೆರೆ ಬದನೆ, ಪುಣಜನೂರಿನ ಬಣ್ಣದ ಬೀನ್ಸ, ಬಿಳಗಿರಿ ರಂಗನ ಬೆಟ್ಟದ ಹುರಿ ಬೀಜ ಕಂಡು ಬಂದವು.
ಮಂಡ್ಯದ ಅಯ್ಯನರಾಗಿ, ಮಲೆ ಮಾದೇಶ್ವರ ಬೆಟ್ಟದ ಮಾದಯ್ಯನಗಿರಿ ರಾಗಿ, ನಾಗಮಲೆ ರಾಗಿ, ಕರಿ ಕಡ್ಡಿ ರಾಗಿ, ಬಣ್ಣದ ಮುಸುಕಿನ ಜೋಳ, ನವಣೆ, ಸಾವೆ ತಮ್ಮ ವಿಶಿಷ್ಟ ಸೊಗಡಿನಿಂದ ಹೆಸರು ಪಡೆದಿದ್ದವು. ಆದರೆ ಈಗ ಈ ತಳಿಗಳೇ ಕಣ್ಮರೆಯಾಗಿವೆ.
ಎರಡು ದಿನಗಳ ಬೀಜ ಮೇಳದಲ್ಲಿ ರಾಜ್ಯದ 30ಕ್ಕೂ ಹೆಚ್ಚಿನ ಬೀಜ ಸಂರಕ್ಷಕರ ಗುಂಪುಗಳು ಪಾಲ್ಗೊಂಡು ಆಕರ್ಷಿಸಿದವು. ಬಾಯಿ ನೀರೂರಿಸುವ `ಸಾವೆ ರೊಟ್ಟಿ’ ಮೇಳದ ಆಕರ್ಷಣೆಯಾಗಲಿದೆ. ವಿವಿಧ ಸಾವಯವ ಮಳಿಗೆಗಳು, ರೈತ ಉತ್ಪಾದಕರ ಗುಂಪುಗಳು ಬೇಳೆ ಕಾಳುಗಳು, ಹಣ್ಣು ಹಂಪಲು ಮಾರಾಟಕ್ಕಿದ್ದವು. ನೈಸರ್ಗಿಕ ಮಾವು, ಹಲಸು, ಪರ್ಪಲ್ ಯಾಮ್ ಐಸ್ ಕ್ರೀಂ ಮತ್ತಿತರ ದೇಸೀ ಆಹಾರ ಉತ್ಪನ್ನಗಳು ಬಾಯಿ ಚಪ್ಪರಿಸಲಿದ್ದವು.