ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಅನುಮತಿ ನೀಡಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂತಿಮ ನೀತಿಯನ್ನು ರೂಪಿಸುವವರೆಗೆ ದೆಹಲಿಯ ರಸ್ತೆಗಳಲ್ಲಿ ಬೈಕ್ ಟ್ಯಾಕ್ಸಿಗಳು ಸಂಚರಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.
ಬೈಕ್ ಟ್ಯಾಕ್ಸಿಗಳನ್ನು ನಡೆಸುವ ರ್ಯಾಪಿಡೋ ಮತ್ತು ಉಬರ್ಗಳಿಗೆ ದೆಹಲಿಯಲ್ಲಿ ಕಾರ್ಯನಿರ್ವಹಿಸಲು ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ದೆಹಲಿ ಸರ್ಕಾರ ಸಲ್ಲಿಸಿದ ಎರಡು ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಿರುದ್ಧ್ ಬೋಸ್ ಮತ್ತು ರಾಜೇಶ್ ಬಿಂದಾಲ್ ಅವರ ರಜಾಕಾಲದ ಪೀಠ ಈ ಮಧ್ಯಂತರ ತಡೆ ನೀಡಿದೆ.
ಸರ್ಕಾರ ಅಂತಿಮ ನೀತಿಯನ್ನು ಪ್ರಕಟಿಸುವವರೆಗೂ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್ ನಿರ್ದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಆಪ್ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
ದೆಹಲಿ ಸರ್ಕಾರದ ಪರ ಹಿರಿಯ ವಕೀಲ ಮನೀಶ್ ವಶಿಷ್ಟ್ ವಾದ ಮಂಡಿಸಿದರು. ಈ ವೇಳೆ ಅಂತಿಮ ನೀತಿಯನ್ನು ಪ್ರಕಟಿಸುವವರೆಗೆ ಸರ್ಕಾರದ ನೋಟಿಸ್ಗೆ ತಡೆ ನೀಡುವ ಹೈಕೋರ್ಟ್ನ ನಿರ್ಧಾರ ರ್ಯಾಪಿಡೋ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಅನುಮತಿಸಿದಂತಿದೆ. ದೆಹಲಿ ಸರ್ಕಾರವು ಈ ವರ್ಷದ ಆರಂಭದಲ್ಲಿ ಬೈಕ್ ಟ್ಯಾಕ್ಸಿಗಳು ದೆಹಲಿಯಲ್ಲಿ ಸಂಚರಿಸದಂತೆ ಎಚ್ಚರಿಕೆ ನೀಡಿತ್ತು ಮತ್ತು ಉಲ್ಲಂಘಿಸಿದರೆ ಒಟ್ಟು 1 ಲಕ್ಷ ರೂ.ಗಳ ವರೆಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿತ್ತು ಎಂದು ನ್ಯಾಯಾಲಯದ ಗಮನಕ್ಕೆ ತಂದರು.