ಬೆಂಗಳೂರು:- ಭಾರತಕ್ಕೆ ಈ ಬಾರಿ ದೊಡ್ಡ ಗಂಡಾತರವೊಂದು ಕಾದಿದೆ ಎಂದು ಕೋಡಿಮಠದ ಡಾ. ಶಿವಾನಂದ ಮಹಾ ಸ್ವಾಮೀಜಿ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಕೋಲಾರ ತಾಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು ಈ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ವರ್ಷ ದೊಡ್ಡ ಅವಘಡ ನಡೆಯಲಿದೆ ಎಂದು ಹೇಳಿದ್ದೆ, ಅದರಂತೆಯೇ ಒಡಿಶಾದಲ್ಲಿ ರೈಲು ಅಪಘಾತ ಸಂಭವಿಸಿದೆ. ಈ ವರ್ಷ ದೇಶಕ್ಕೆ ಇನ್ನೊಂದು ಗಂಡಾಂತರ ಕಾದಿದೆ ಎಂದು ಹೇಳಿದರು. ಈ ವರ್ಷ ಗುಡುಗು, ಮಿಂಚು ಹೆಚ್ಚಾಗಲಿದೆ, ಎರಡರಿಂದ ಮೂರು ದೇಶಗಳು ನೀರಿನಲ್ಲಿ ಮುಳುಗಲಿವೆ, ಎಲ್ಲೋ ನಡೆಯುವ ಬಾಂಬ್ ದಾಳಿಯಿಂದ ಭಾರತಕ್ಕೆ ಅನಾಹುತ ಸಂಭವಿಸಲಿದೆ ಎಂದು ಭವಿಷ್ಯ ಹೇಳಿದರು.
ಗಿಡ, ಮರಗಳು ದೇವರ, ಭಕ್ತಿಯ ಸಂಕೇತ, ಕೈವಾರ ತಾತಯ್ಯನರುವು ಮತ್ತೆ ಹುಟ್ಟಿ ಬರುವ ಸಾಧ್ಯತೆ ಇದೆ, ಅಂತಹ ಸೂಚನೆ ಕೂಡ ಬೆಟ್ಟದಲ್ಲಿ ಈಗಾಗಲೇ ಸಿಕ್ಕಿದೆ. ಆಧ್ಯಾತ್ಮಿಕವಾಗಿ ರಾಜ್ಯ ಸರ್ಕಾರ ನಡೆಯುತ್ತಿದೆ ಹಾಗಾಗಿ ಅವರಿಗೆ ಒಳ್ಳೆಯದಾಗಲಿ, ಆಧ್ಯಾತ್ಮ ಬಿಟ್ಟು ಬೇರೆ ದಾರಿಯಲ್ಲಿ ನಡೆದರೆ, ಅದಕ್ಕೆ ದೈವವೇ ಪ್ರತಿಕ್ರಿಯೆ ನೀಡಿಲಿದೆ ಎಂದು ಹೇಳಿದರು.
ಭಾರತಕ್ಕೆ ಕಾದಿದೆಯಾ ಅತಿವೃಷ್ಠಿ
ಕೋಡಿಮಠ ಶ್ರೀಗಳು ಹೇಳಿರುವಂತೆ ಈ ಬಾರಿ ಭಾರತಕ್ಕೆ ಕೂಡ ಪ್ರವಾಹದ ಭೀತಿ ಕಾದಿದೆಯಾ ಎನ್ನುವ ಆತಂಕ ಮೂಡಿದೆ. ಬಿಪರ್ ಜಾಯ್ ಚಂಡಮಾರುತದಿಂದ ಕರ್ನಾಟಕ, ಮಹಾರಾಷ್ಟ್ರ, ಕೇರಳದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗ್ನೇಯ ರಾಜ್ಯಗಳಲ್ಲಿ ಕೂಡ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸೂಚನೆ ನೀಡಿದೆ. ಈ ವರ್ಷ ಭಾರಿ ಪ್ರವಾಹ ಎದುರಿಸುವ ಇನ್ನೆರಡು ದೇಶಗಳು ಯಾವುವು ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.
ಕರ್ನಾಟಕ ರಾಜಕೀಯದ ಬಗ್ಗೆ ನಿಖರ ಭವಿಷ್ಯ
2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಕೋಡಿ ಮಠ ಶ್ರೀಗಳು ನಿಖರ ಭವಿಷ್ಯ ನುಡಿದಿದ್ದರು. ಈ ಬಾರಿ ಚುನಾವಣೆಯಲ್ಲಿ ಪಕ್ಷಾಂತರ ನಡೆಯಲಿದೆ, ಹಲವು ದೊಡ್ಡ ತಲೆಗಳು ಉರುಳಲಿವೆ, ಆದರೆ ಕೊನೆಯಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದರು. ಅವರು ನುಡಿದಂತೆ ಹಲವು ಪ್ರಮುಖ ಮುಖಂಡರು ಪಕ್ಷಗಳನ್ನು ಬದಲಾಯಿಸಿದ್ದರು, ಹಲವು ಕ್ಷೇತ್ರಗಳಲ್ಲಿ ಹಿರಿಯ ನಾಯಕರು, ಸಚಿವರು ಕೂಡ ಸೋಲನುಭವಿಸಿದ್ದರು, ಅಂತಿಮವಾಗಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿತ್ತು.